ದೇವದುರ್ಗ – ಶಹಾಪುರ ನಡುವೆ ಸಂಪರ್ಕ ಕಡಿತ?
ದೇವದುರ್ಗ: ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕರ್ನಾಟಕಕ್ಕೆ ನೀರಿನ ಹರಿವು ಹೆಚ್ಚಿದ್ದು ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯಗಳು ಭರ್ತಿ ಆಗಿವೆ. ಕೃಷ್ಣಾ ನದಿಪಾತ್ರದಲ್ಲಿ ಪ್ರವಾಹದ ಭೀತಿ ಸೃಷ್ಠಿಯಾಗಿದ್ದು ಈಗಾಗಲೇ ಅಧಿಕಾರಿಗಳು ಈ ಬಗ್ಗೆ ಗ್ರಾಮೀಣ ಜನರಿಗೆ ಮಾಹಿತಿ ರವಾನಿಸಿದ್ದು ಜಾಗೃತರಾಗಿರಲು ಮನವಿ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು ಕೆಲ ಗ್ರಾಮಗಳ ಸಂಪರ್ಕ ಕಡಿತ ಆತಂಕ ಮೂಡಿದೆ. ದೇವದುರ್ಗದಿಂದ ಕಲಬುರಗಿಗೆ ತೆರಳುವ ಮಾರ್ಗದಲ್ಲಿರುವ ಹೂವಿನಹೆಡಗಿ ಸೇತುವೆ ಬಹುತೇಕ ಮುಳುಗಿದ್ದು ನದಿ ನೀರು ಭೋರ್ಗರೆಯುತ್ತಿದೆ. ಪರಿಣಾಮ ಇನ್ನೊಂದು ಅಡಿ ನೀರು ಬಂದರೂ ದೇವದುರ್ಗ-ಶಹಾಪುರ ನಡುವೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
ರಾಯಚೂರು ಜಿಲ್ಲಾಡಳಿತ ಹಾಗೂ ಯಾದಗಿರಿ ಜಿಲ್ಲಾಡಳಿತ ಈ ಬಗ್ಗೆ ತೀವ್ರ ನಿಗಾ ವಹಿಸಿದ್ದು ಎಚ್ಚರವಾಗಿರುವಂತೆ ಜನರಿಗೆ ಸೂಚಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಾದರೂ ನಿಭಾಯಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.