ಕಾಂಗ್ರೆಸ್ ಸರ್ಕಾರದ ಡಿನೋಟಿಫೈ ಹಗರಣ ಬಯಲು ಮಾಡುವೆ : ಬಳ್ಳಾರಿಯಲ್ಲಿ ಬಿ.ಎಸ್.ವೈ ಬಾಂಬ್
ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬೆಂಗಳೂರಿನ ಜಯನಗರದಲ್ಲಿ 200 ಕೋಟಿ ಮೌಲ್ಯದ ಆಸ್ತಿಯ ಡಿನೋಟಿಫೈ ಮಾಡಲಾಗಿದೆ. ಈ ಬಗ್ಗೆ ದಾಖಲೆಗಳನ್ನು ಕಲೆ ಹಾಕಲಾಗುತ್ತಿದ್ದು ದಾಖಲೆಗಳನ್ನು ರಾಜ್ಯಪಾಲರಿಗೆ ನೀಡಿ ದೂರು ಸಲ್ಲಿಸಲಾಗುವುದು. ಮುಂದಿನ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರ ಅಧಿಕಾರ ಹಿಡಿದ 24 ಗಂಟೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಅಕ್ರಮಗಳ ಬಗ್ಗೆ ಮರು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.
ಕೂಡ್ಲಗಿ ಪಟ್ಟಣದಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ ನಂತರ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ಈ ಹಿಂದೆ ಸೋನಿಯಾಗಾಂಧಿ ಅವರು ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದರು. ಕ್ಷೇತ್ರಕ್ಕೆ ವಿಶೇಷ ಕೊಡುಗೆ ಕೊಡುವುದಾಗಿ ಹೇಳಿದ್ದರು. ಆದರೆ, ತಿರುಗಿ ನೋಡದೆ ಕೈ ಕೊಟ್ಟು ಹೋಗಿದ್ದಾರೆ. ಈಗ ರಾಹುಲ್ ಗಾಂಧಿ ಬರುತ್ತಿದ್ದಾರಂತೆ. ಅವರೇನು ಅಭಿವೃದ್ಧಿ ಮಾಡುತ್ತಾರೆ ನೋಡಿ ಎಂದು ಬಿಎಸ್ ವೈ ವ್ಯಂಗ್ಯವಾಡಿದ್ದಾರೆ.