ಪ್ರಮುಖ ಸುದ್ದಿ

ಬಿಎಸ್‍ವೈ ಸಿಎಂ ಆಗಲೆಂದು ದೇವರ ಮೊರೆ ಹೋದ ಬಿಜೆಪಿ

ಸಮೃದ್ಧ ಮಳೆ, ಬೆಳೆ ರಾಜಕೀಯ ಅಸ್ಥಿರ ನಿವಾರಣೆಗೆ ಪೂಜೆ

ಯಾದಗಿರಿ, ಶಹಾಪುರಃ ಯಾದಗಿರಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ನೇತೃತ್ವದಲ್ಲಿ ಬಿಜೆಪಿ ರಾಜ್ಯಧ್ಯಕ್ಷ, ಅವರ ನೆಚ್ಚಿನ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಸ್ಥಾನ ಅಲಂಕರಿಸಲಿ ಎಂದು ಆಶಿಸಿ, ತಾಲೂಕಿನ ಸುಕ್ಷೇತ್ರ ದೋರನಹಳ್ಳಿ ಮಹಾಂತೇಶ್ವರ ಬೆಟ್ಟದ ಮೂಲ ಮಹಾಂತೇಶ್ವರರ ಶಿವಲಿಂಗುವಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳು ಬರದಿಂದ ತತ್ತರಿಸಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಮೊದಲು ಸಮೃದ್ಧ ಮಳೆ ಬೆಳೆಯನ್ನು ಗುಡ್ಡದ ಮಹಾಂತೇಶ್ವರ ಕಲ್ಪಿಸಲಿ, ಎರಡನೇಯದು ನಮ್ಮೆಲ್ಲರ ಮೆಚ್ಚಿನ ರೈತ ನಾಯಕ ಬಿ.ಎಸ್.ಯಡಿಯೂರಪ್ಪಾಜಿ ಅವರು ಕೂಡಲೇ ಸಿಎಂ ಸ್ಥಾನವನ್ನು ಅಲಂಕರಿಸುವ ಮೂಲಕ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದು, ರಾಜ್ಯದ ಜನರ ಆಶಯದಂತೆ ಸಂತೃಪ್ತದಾಯಕ ಆಡಳಿತ ನಡೆಸಲಿ ಎಂದು ಸಂಕಲ್ಪದೊಂದಿಗೆ ಪೂಜೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಮತ್ತು ಗ್ರಹಣದ ಕೆಟ್ಟ ಪ್ರಭಾವ ಅಂತ್ಯಗೊಂಡಿದ್ದು, ಇಡಿ ರಾಜ್ಯ ಸ್ವಚ್ಛವಾಗಿದ್ದು, ಸ್ವಚ್ಛ ಆಡಳಿತಕ್ಕೆ ಬಿಜೆಪಿ ಸಜ್ಜಾಗಿದ್ದು, ಬಿಎಸ್‍ವೈ ನೇತೃತ್ವದಲ್ಲಿ ರಾಜ್ಯ ಆಡಳಿತ ಉತ್ತಮವಾಗಿ ನಡೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಮಾಜಿ ಶಾಸಕ ವೀರಬಸವಂತರಡ್ಡಿ ಮುದ್ನಾಳ ಮಾತನಾಡಿ, ರಾಜ್ಯಕ್ಕೆ ಕಾಡುತ್ತಿರುವ ರಾಜಕೀಯ ಅಸ್ಥಿರತೆ ಅಂತಿಮಗೊಂಡು, ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿ.

ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿ ಎಂದು ಪ್ರಾರ್ಥನೆ ಸಲ್ಲಸಲಾಗಿದೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ನಿತ್ಯ ಕಚ್ಚಾಟದಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಕೈಗೂಡಿಲ್ಲ. ಹೀಗಾಗಿ ಜನತೆ ರೈತರು ಸಂಕಷ್ಟದಲ್ಲಿ ಮುಳುಗಿದ್ದಾರೆ.

ಜನರ ಕಷ್ಟ ಕೇಳುವವರು ಯಾರು ಇಲ್ಲ. ಮೈತ್ರಿ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಕಚ್ಚಾಟ ನಡೆಯುತ್ತಿದೆ. ಕಾರಣ ಇದಕ್ಕೆಲ್ಲ ಶೀಘ್ರದಲ್ಲಿ ಅಂತ್ಯಗೊಂಡು ಸ್ಥಿರವಾದ ಬಿಜೆಪಿ ಸರ್ಕಾರ ರಚನೆಗೊಂಡು ಯಡಿಯೂರಪ್ಪನವರು ಸಿಎಂ ಆಗಲಿದ್ದು, ದೇವರ ಆಶೀರ್ವಾದ ಖಂಡಿತವಾಗಿ ಇದೆ. ರಾಜ್ಯದ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಒದಗಿಬರಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ ಸುಬೇದಾರ ಸೇರಿದಂತೆ ಯಾದಗಿರಿ ಮತ್ತು ಶಹಾಪುರ ತಾಲೂಕಿನ ಪ್ರಮುಖರು ಕಾರ್ಯಕರ್ತರು ಮತ್ತು ರೈತರು ಭಾಗವಹಿಸಿದ್ದರು. ಕಾರ್ಯಕರ್ತರು, ರೈತರು ಮಹಾಂತೇಶ್ವರ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಸುವ ಮೂಲಕ ದೇವರ ನಾಮ ಜಪಿಸಿದರು.

Related Articles

Leave a Reply

Your email address will not be published. Required fields are marked *

Back to top button