‘ಟಿಪ್ಪು ಜಯಂತಿ’ ಸವಾಲು ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಆದೇಶಿಸಿದೆ. ಈ ಹಿಂದೆ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಸಾವು, ನೋವು ಸಂಭವಿಸಿವೆ. ಪರಿಣಾಮ ನಿಷೇದಾಜ್ಞೆ ನಡುವೆ ಟಿಪ್ಪು ಜಯಂತಿ ಆಚರಿಸುವ ಸ್ಥಿತಿ ನಿರ್ಮಾಣ ಆಗಿದೆ. ಕಾರಣ ಟಿಪ್ಪು ಜಯಂತಿ ಆಚರಣೆ ರದ್ದುಗೊಳಿಸುವಂತೆ ವಿರಾಜಪೇಟೆ ಬಿಜೆಪಿ ಶಾಸಕ ಕೆ.ಜಿ.ಭೊಪಯ್ಯ ಅವರು ನಿನ್ನೆಯಷ್ಟೇ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದರು.
ಸಿಎಂ ಯಡಿಯೂರಪ್ಪ ನೇತೃತ್ವದ ಎರಡನೇ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಶಾಸಕ ಭೊಪಯ್ಯ ಮನವಿಗೆ ಸ್ಪಂದಿಸಿದ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಚರಿಸುವ ಟಿಪ್ಪು ಜಯಂತಿ ರದ್ದುಗೊಳಿಸಿ ಆದೇಶಿಸಿದೆ.
ಆ ಮೂಲಕ ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಜಾರಿಗೊಳಿಸಿದ್ದ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಎಳ್ಳು ನೀರು ಬಿಟ್ಟಿರುವ ಯಡಿಯೂರಪ್ಪ ಸರ್ಕಾರ ಸಿದ್ಧರಾಮಯ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಅಂತೆಯೇ ಟಿಪ್ಪು ಜಯಂತಿ ರದ್ದು ವಿವಾದವಾಗಿ ಸರ್ಕಾರವನ್ನು ಕಾಡುವ ಸಾಧ್ಯತೆಗಳಿದ್ದು ಪ್ರತಿಭಟನೆಗಳು ವ್ಯಕ್ತವಾಗಲಿವೆ. ಆ ಸವಾಲಿಗೆ ಯಡಿಯೂರಪ್ಪ ಎದೆಯೊಡ್ಡಲು ನಿರ್ಧರಿಸಿಯೇ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ ಎಂಬುದು ಬಿಜೆಪಿ ಮೂಲಗಳಿಂದ ಕೇಳಿ ಬರುತ್ತಿರುವ ಮಾತಾಗಿದೆ.