ಬಜೆಟ್ ಬಗ್ಗೆ ಯಾದಗಿರಿ ಗಣ್ಯರು ಏನ್ ಹೇಳ್ತಾರೆ.?
ಶುಕ್ರವಾರ ಸಿಎಂ ಸಿದ್ರಾಮಯ್ಯನವರು ಪ್ರಕಟಿಸಿದ ಆಯವ್ಯಯ ಕುರಿತು ವಿನಯವಾಣಿ ಯಾದಗಿರಿ ಜಿಲ್ಲೆಯ ಗಣ್ಯರನ್ನು ಮಾತಾಡಿಸಿದಾಗ ಪರ ಹಾಗೂ ವಿರೋಧ ಅನಿಸಿಕೆ ವ್ಯಕ್ತವಾಗಿದ್ದು ಹೀಗೆ..
ಸಮಗ್ರ ಅಭಿವೃದ್ಧಿ ಕುರಿತಾದ ಬಜೆಟ್..
ಸಿಎಂ ಸಿದ್ರಾಮಯ್ಯನವರು ಮಂಡಿಸಿದ 13ನೇ ಬಜೆಟ್ ನಾಡಿನ ಸಮಗ್ರ ಅಭಿವೃದ್ಧಿ ಕುರಿತಾಗಿದೆ. ಇದು ಯಾವುದೇ ಚುನಾವಣಾ ಬಜೆಟ್ ಅಲ್ಲ. ಹಲವಾರು ಶೋಷಿತ, ನಿರ್ಲಕ್ಷಿತ, ಅಲಕ್ಷಿತ, ಹಿಂದುಳಿದ, ಅಲ್ಪಸಂಖ್ಯಾತ ಮುಂತಾದ ವಿವಿಧ ತಳಸಮುದಾಯಗಳ ಜೀವನಮಟ್ಟ ಸುಧಾರಿಸಲು ಹಲವಾರು ಸೌಲಭ್ಯ- ಸೌಕರ್ಯಗಳನ್ನು ಒಳಗೊಂಡಿದೆ. ಕೃಷಿ, ನಿರಾವರಿ, ಪಶು ಸಂಗೋಪನೆ, ಶಿಕ್ಷಣ, ಉದ್ಯೋಗ, ಸಹಕಾರ, ಮಹಿಳಾ ಸಬಲೀಕರಣ, ಸರ್ಕಾರಿ ನೌಕರರ ವೇತನ ಶೆ.30ರಷ್ಟು ಹೆಚ್ಚಳವನ್ನೂ ಸೇರಿದಂತೆ ಇತರೆ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿರುವುದು ಶ್ಲಾಘನೀಯ.
–ಶರಣಬಸಪ್ಪಗೌಡ ದರ್ಶನಾಪುರ. ಮಾಜಿ ಸಚಿವರು
—————
ಮೊದಲಿನ ಬಜೆಟ್‍ಗೆ ತುಲನೆ ಮಾಡಿ..ನೋಡಿ
ಇದು ಚುನಾವಣೆ ಅಂಗವಾಗಿ ಪೂರ್ವ ತಯಾರಿ ನಡೆಸಿಕೊಂಡು ಮಂಡಿಸಿದ ಬಜೆಟ್ ಆಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತು ಪಡಿಸುತ್ತದೆ. ಅಲ್ಲದೆ ಈ ಬಜೆಟ್ ಪ್ರತಿ ಪ್ರಸ್ತಾವನೆಗೆ ಸಲ್ಲಿಕೆಯಾಗಿ ಜಾರಿಯಾಗುವಷ್ಟರಲ್ಲಿ ಚುನಾವಣೆ ಘೋಷಣೆಯಾಗುತ್ತವೆ. ಹೀಗಾಗಿ ಈ ಬಜೆಟ್ ಬಗ್ಗೆ ಚರ್ಚೆ, ಆಸೆ ಆಕಾಂಕ್ಷೆಗಳು ಇಟ್ಟುಕೊಳ್ಳುವುದು ವ್ಯರ್ಥ.
-ಗುರು ಪಾಟೀಲ್ ಶಿರವಾಳ. ಶಾಸಕರು.
——————
ರೈತರ ನೈಜ ಸ್ಥಿತಿ ಸರ್ಕಾರದ ಗಮನಿಕ್ಕಿಲ್ಲ
ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾಗಿ ಬೆಂಬಲ ಬೆಲೆ ನೀಡಿ ಖರೀದಿ ಮಾಡಲು ಆಗಲಿಲ್ಲ. ಈಗೇನು ಕೊನೆಗಳಿಗೆಯಲ್ಲಿ ಮಾಡುವರಿವರು. ಒಣ ಬೇಸಾಯಕ್ಕೆ ಸಹಾಯ ಧನ ಬಗ್ಗೆ ಬಜೆಟ್‍ನಲ್ಲಿ ಉಲ್ಲೇಕಿಸಿದ್ದಾರೆ ಎಂಬ ಮಾತಿಗೆ, ಪ್ರಸ್ತುತ ರೈತರ ಸ್ಥಿತಿ ಬಗ್ಗೆಯೇ ಅವರಿಗೆ ಅರಿವಿಲ್ಲ. ಪ್ರಾಮಾಣಿಕವಾಗಿ ಬರಬೇಕಿದ್ದ ವಿಮೆ ಹಣನೇ ರೈತರ ಖಾತೆಗೆ ಜಮೆ ಮಾಡಲಾಗಿಲ್ಲ. ಇನ್ನೇನು ಸಹಾಯಧನ ರೂಪಿಸುತ್ತಾರೆ. ಇದೆಲ್ಲ ಆಗುವ ಕೆಲಸವಲ್ಲ ಬಿಡಿ. ಈ ಬಜೆಟ್ ಅಪಹಾಸ್ಯಕ್ಕೆ ಈಡು ಮಾಡಿದೆ.
-ಮಲ್ಲಣ್ಣ ಪರಿವಾಣ ಗೋಗಿ. ಜಿಲ್ಲಾ ರೈತ ಮುಖಂಡರು.
————-
ಬಜೆಟ್ ಬಗ್ಗೆ ಕಾಂಗ್ರೆಸ್‍ನವರಲ್ಲಿಯೇ ಉತ್ಸಾಹವಿಲ್ಲ..
ಸಿಎಂ ಬಜೆಟ್ ಮಂಡಿಸುವಾಗ ಜವಬ್ದಾರಿಯುತ ಸಚಿವರು ಸೇರಿದಂತೆ ಬಹುತೇಕ ಶಾಸಕರು ಉಪಸ್ಥಿತರಿರಿಲ್ಲ. ಅಲ್ಲದೆ ಸಭಾಧ್ಯಕ್ಷರು ಎರಡು ಬಾರಿ ಎದ್ದು ಹೋಗಿ ಬಂದರು. ಸಿದ್ರಾಮಯ್ಯನವರು ಮಾತ್ರ ಹಾಗೇ ಬಜೆಟ್ ಮಂಡನೆ ನಡೆಸಿಯೇ ಇದ್ದರೂ..ಹೀಗಾಗಿ ಕಾಂಗ್ರೆಸ್‍ನವರಲ್ಲಿಯೇ ಈ ಬಜೆಟ್ ಬಗ್ಗೆ ಉತ್ಸಾಹ ಕಂಡು ಬಂದಿಲ್ಲ. ಇದು ಪೊಳ್ಳು ಬಜೆಟ್ ಎಂಬುದು ಎಲ್ಲರಿಗೂ ತಿಳಿದಿದೆ.
-ಶರಣಭೂಪಾಲರಡ್ಡಿ. ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯರು.ಯಾದಗಿರಿ.