ಖಾಸಗಿ ಬಸ್ ಬೆಂಕಿಗಾಹುತಿ : ಪ್ರಯಾಣಿಕರು ಸೇಫಾಗಿದ್ದೇ ಮಿರಾಕಲ್!
ಚಾಲಕನ ಸಮಯ ಪ್ರಜ್ಞೆ: ಪ್ರಯಾಣಿಕರ ಪ್ರಾಣ ರಕ್ಷಣೆ
ಮಂಡ್ಯ: ಬೆಂಗಳೂರು ನಗರದಿಂದ ಮೈಸೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ತಾಂತ್ರಿ ದೋಷ ಕಾಣಿಸಿಕೊಂಡಿದೆ. ಇಂಜಿನ್ ನಲ್ಲಿ ಹೊಗೆ ಬರಲಾರಂಭಿಸಿದ ಪರಿಣಾಮ ತಕ್ಷಣ ಎಚ್ಚೆತ್ತುಕೊಂಡ ಚಾಲಕ ರಸ್ತೆ ಬದಿಗೆ ಬಸ್ ನಿಲ್ಲಿಸಿದ್ದಾನೆ. ಮಂಡ್ಯ ಜಿಲ್ಲೆಯ ಮದ್ದೂರಿನ ಕೊಲ್ಲಿ ವೃತ್ತದ ಸಮೀಪ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಎಚ್ಚರಿಸಿ ಕೆಳಗಿಳಿಸಿದ್ದಾನೆ. ಪ್ರಯಾಣಿಕರು ಕೆಳಗಿಳಿದ ಕ್ಷಣಾರ್ಧದಲ್ಲಿ ಬಸ್ ಬೆಂಕಿಗಾಹುತಿಯಾಗಿದೆ. ಕಣ್ಣೆದುರೇ ಬಸ್ ಸುಟ್ಟು ಕರಕಲಾದದ್ದನ್ನು ಕಂಡ ಪ್ರಯಾಣಿಕರು ಒಂದು ನಿಮಷ ತಡವಾಗಿದ್ದರೂ ನಮ್ಮ ಗತಿ ಏನಾಗುತ್ತಿತ್ತು ಎಂದು ನೆನೆದು ಬೆಚ್ಚಿಬಿದ್ದಿದ್ದಾರೆ.
ಎಸ್ ಆರ್ ಎಸ್ ಕಂಪನಿಯ ಬಸ್ ನಲ್ಲಿ ಸುಮಾರು 15ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದರು. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕರು ಬಚಾವ್ ಆಗಿದ್ದಾರೆ. ಹೀಗಾಗಿ, ಪ್ರಯಾಣಿಕರು ತಮ್ಮ ಪ್ರಾಣ ಉಳಿಸಿದ ಬಸ್ ಚಾಲಕನಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.