ಕಾವ್ಯ
ಪಾವನವಿ ಧರೆ….ಭವವಿದು ಚೈತನ್ಯದ ಚಿಲುಮೆ
ಪಾವನವಿ ಧರೆ….
ಬಂದಾಗಿದೆ ಹುಟ್ಟಿ ಹುಡುಗಾಟವಲ್ಲ
ದೈವವಿತ್ತ ಅಮೂಲ್ಯ ಕಾಣಿಕೆ
ಹುಡುಕಾಡಬೇಕಲ್ಲ
ಎಲ್ಲರೊಳಗೊಂದಾಗಿ ಬದುಕಬೇಕಲ್ಲ
ನಿಂತ ನೀರಾದರೆನಿತು ಸೊಗಸು
ರಾಡಿ ಜೀವನವೆಲ್ಲ.
ವಸುಧೈವ ಕುಟುಂಬಕಂ ಆದರದ ಬದುಕು
ಮೇಲು ಕೀಳು ಬೇಕಿಲ್ಲ ಎಲ್ಲ ಒಂದೆ ಎಣಿಸು
ಬಂಗಾರದಿ ಬರೆದಿಟ್ಟಿಹ ಬಾಳಿನಲಿ ಸೊಗಸು
ಕೂಡಿಬಾಳಿದರೆ ಸ್ವರ್ಗ ಈ ಧರೆಯ ಮನಸು
ಒಡಲುಗಳಲಿ ಬಿಳುಲಾಗಿ ಹಬ್ಬಿದ ಕನಸು
ಮರೆತು ಬದುಕದೆ ಅರಿತು ಜೀವಿಸಿದರೆ ನನಸು
ಹಸನಾದ ಬದುಕು ಬದುಕೋಣ
ಭವವಿದು ಚೈತನ್ಯದ ಚಿಲುಮೆ ಒರತೆಯಾಗೋಣ
ಸದಾ ಕಾಯಕದಲಿ ನಿರತರಾಗೋಣ
ಅರಿತು ಬೆರೆತು ಭಾವೈಕ್ಯದಲಿ ಜತೆಯಾಗೋಣ
ನಾನು ನನ್ನದೆಂಬ ಅಹಂ ತೊರೆಯೋಣ
ಕಮರಿದ ಬದುಕಲಿ ಭರವಸೆ ಭರಿಸೋಣ.
ಮೂರುದಿನದ ಬದುಕಲಿ ಉರುಳಾಗದೆ ಊರುಗೋಲಾಗೋಣ.
ನಡೆ ನುಡಿ ಧೀಮಂತವಾಗಲಿ
ನಲಿವಿನ ನವಿಲಿನ ಹೆಜ್ಜೆಯಾಗಲಿ
ಧರೆಯ ಉಸಿರಾಗುತ ಹಸಿರಲಿ
ಭೂತಾಯಿಯ ಬಸಿರಲಿ ಆನಂದದಲಿ.
–ಜಯಶ್ರೀ ಭ.ಭಂಡಾರಿ.