ಶ್ರೀ ಶರಣಬಸವೇಶ್ವರರ ಸಂಭ್ರಮದ ರಥೋತ್ಸವ
ಶಹಾಪುರದಲ್ಲಿ ಶರಣಬಸವೇಶ್ವರರ ರಥೋತ್ಸವ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ದಿಗ್ಗಿಬೇಸ್ ಹತ್ತಿರದ ಶರಣಬಸವೇಶ್ವರ ಮಠದಿಂದ ಗಾಂಧಿ ಚೌಕ್ ಸಮೀಪದ ಗುಗ್ಗಳ ಬಸವೇಶ್ವರ ದೇವಸ್ಥಾನದವರೆಗೆ ಶ್ರೀಶರಣಬಸವೇಶ್ವರ ರಥೋತ್ಸವವು ಮಂಗಳವಾರ ಸಂಜೆ ಸಂಭ್ರಮದಿಂದ ಜರುಗಿತು.
ಬೆಳಗ್ಗೆಯಿಂದಲೇ ಶ್ರೀಮಠಕ್ಕೆ ಭಕ್ತಾಧಿಗಳು ನೈವೇದ್ಯ, ಕಾಯಿ, ಕರ್ಪೂರ ಸಮರ್ಪಿಸಿ ದರ್ಶನ ಪಡೆದರು. ಸಂಜೆ ಹೂಗಳಿಂದ ಅಲಂಕರಿಸಿದ್ದ ರಥೋತ್ಸವವನ್ನು ಶ್ರೀಮಠದ ಪೀಠಾಧಿಪತಿಗಳಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಿತು. ಅಪಾರ ಸಂಖ್ಯೆಯ ಭಕ್ತಾಧಿಗಳ ಜಯಘೋಷದೊಂದಿಗೆ ಜರುಗಿತು.
ರಥೋತ್ಸವ ಸಂದರ್ಭದಲ್ಲಿ ಹಿಂದೆ ಶರಣಬಸವೇಶ್ವರರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯು ಜರುಗಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಪಲ್ಲಕ್ಕಿಯಲ್ಲಿರುವ ಉತ್ಸವ ಮೂರ್ತಿಯ ದರ್ಶನ ಪಡೆದರು. ರಥ ಬೀದಿಯಲ್ಲಿ ಸಾಗುತ್ತಿರುವಾಗ ಶರಣಬಸವೇಶ್ವರರ ಸಾನ್ನಿಧ್ಯದ ರಥಕ್ಕೆ ಭಕ್ತಾಧಿಗಳು ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಪೂರ್ವಕ ನಮನ ಸಲ್ಲಿಸಿದರು. ಮಹಿಳೆಯರು, ಹಿರಿಯರು ಮಕ್ಕಳಾದಿಯಾಗಿ ಅಸಂಖ್ಯಾತ ಭಕ್ತ ಸಮೂಹ ಭಾಗವಹಿಸಿದ್ದರು.
ರಥ ಪುನಃ ಮೂಲಸ್ಥಾನ ತಲುಪವವರೆಗೆ ಜಾತ್ರೆ ಸಂಭ್ರಮ ಮನೆ ಮಾಡಿತ್ತು. ಸಮೀಫದ ಕಲಬುರ್ಗಿಯಲ್ಲೂ ಶ್ರೀ ಶರಣಬಸವೇಶ್ವರರ ಮಹಾ ರಥೋತ್ಸವ ಿದೇ ವೇಳೆಗೆ ನಡೆಯುವುದು ವಿಶೇಷ. ಕಲಬುರ್ಗಿಯಲ್ಲಿ ಲಕ್ಷಾಂತರ ಜನ ಸೇರುತ್ತಾರೆ, ಅದೇ ಸಮಯಕ್ಕೆ ನಗರದಲ್ಲಿ ಈ ರಥೋತ್ಸವಕ್ಕೆ ಸಹಸ್ರಾರು ಜನ ಸೇರುವುದು ವಿಶೇಷ. ಸುತ್ತಲಿನ, ನಗರ ಹಳ್ಳಿಗಳಿಂದ ಕಲಬುರ್ಗಿಗೆ ತೆರಳಿರುತ್ತಾರೆ. ಆದಾಗ್ಯು ಈ ರಥೋತ್ಸವಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವುದು ಒಂದು ವಿಶೇಷವೇ ಸರಿ. ಜಾತಿಬೇಧ ಭಾವವಿಲ್ಲದೆ ಸಕಲ ಸಮುದಾಯದ ಸದ್ಭಕ್ತರು ಪಾಲ್ಗೊಂಡು ಶರಣರ ಕೃಪೆಗೆ ಪಾತ್ರರಾದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.