ಲಿಂಗಾಯತ ಧರ್ಮ : ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿಎಂ ಸಿದ್ಧರಾಮಯ್ಯ ಮಾಸ್ಟರ್ ಪ್ಲಾನ್?
ವೀರಶೈವ – ಲಿಂಗಾಯತ ಸ್ವತಂತ್ರ ಧರ್ಮ ವಿಚಾರ ಕುರಿತು ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈಗಾಗಲೇ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಅನೇಕ ಸಲ ಹೇಳಿದ್ದಾರೆ. ಆದರೆ, ಕಳೆದ ಸಲ ಕರೆಯಲಾಗಿದ್ದ ಸಂಪುಟ ಸಭೆಯನ್ನು ಸ್ವತಂತ್ರ ಧರ್ಮ ವಿಚಾರಕ್ಕಾಗಿಯೇ ಆರೋಗ್ಯದ ನೆಪವೊಡ್ಡಿ ಮುಂದೂಡಲಾಗಿತ್ತು. ಲಿಂಗಾಯತ ಧರ್ಮ ವಿಚಾರದಲ್ಲಿ ಕೈಗೊಳ್ಳುವ ನಿರ್ಣಯ ಸಿಎಂ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ಸಿಗೆ ತಿರುಗುಬಾಣ ಆಗಲಿದೆ ಎಂಬ ಕಾರಣಕ್ಕೆ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದೇ ವ್ಯಾಖ್ಯಾನಿಸಾಗಿತ್ತು.
ಇಂದು ಸಚಿವ ಸಂಪುಟ ಸಭೆ ನಡೆಯಲ್ಲಿದ್ದು ಈಗಾಗಲೇ ವೀರಶೈವ ಮತ್ತು ಲಿಂಗಾಯತ ಮಠಾಧೀಶರು ತಮ್ಮದೇ ಆದ ವಾದ ಮಂಡಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಪರ-ವಿರೋಧ ಮನವಿ ಸಲ್ಲಿಸಿದ್ದಾರೆ. ಇಬ್ಬರ ಮನವಿಗಳನ್ನೂ ಸ್ವೀಕರಿಸಿರುವ ಸಿಎಂ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅಸಲಿಗೆ ವೀರಶೈವ – ಲಿಂಗಾಯತ ಸಮುದಾಯ ಕಾಂಗ್ರೆಸ್ ಮತಬ್ಯಾಂಕ್ ಅಲ್ಲ. ಈ ವಿವಾದದಿಂದ ಕಾಂಗ್ರೆಸ್ಸಿನತ್ತ ಲಿಂಗಾಯತರು ಒಲವು ಹೊಂದಿದರೆ ಪ್ರಾಫಿಟ್. ಇಲ್ಲವಾದರೆ ನೋ ಲಾಸ್ ನೋ ಪ್ರಾಫಿಟ್ ತಂತ್ರ ಸಿದ್ಧರಾಮಯ್ಯ ಅವರದ್ದು. ಹೀಗಾಗಿ, ಬಿಜೆಪಿ ಮತಬ್ಯಾಂಕ್ ಎಂದೇ ಭಾವಿಸಲಾಗಿದ್ದ ಜೇನುಗೂಡಿಗೆ ಕಲ್ಲೆಸೆಯುವುದು ಸಿಎಂ ಉದ್ದೇಶವಾಗಿತ್ತು. ಆದರೆ, ಈಗ ನಮಾಜಿಗೆ ಹೋಗಿ ಮಸೀದಿ ಕೊರಳಿಗೆ ಹಾಕಿಕೊಂಡರು ಎಂಬ ಸ್ಥಿತಿ ಸಿದ್ಧರಾಮಯ್ಯ ಅವರದ್ದಾಗಿದೆ.
ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂಬುದಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ವೀರಶೈವರು ಮುನಿಸಿಕೊಳ್ಳುತ್ತಾರೆಂಬ ಭಯವೇನೂ ಸಿಎಂಗೆ ಇದ್ದಂತಿಲ್ಲ. ಕಾರಣ ಈಗಾಗಲೇ ವೀರಶೈವ ಮಠಾಧೀಶರು ಮತ್ತು ಮುಖಂಡರು ಸಿಎಂ ಹಾಗೂ ಕಾಂಗ್ರೆಸ್ ವಿರುದ್ಧ ಗರಂ ಆಗಿದ್ದಾರೆ. ಆದರೆ, ಈ ನಿರ್ಧಾರದಿಂದ ತಮಗೆ ನಷ್ಟವಾದೀತು ಎಂದು ಭಾವಿಸುವ ಇತರೆ ಅಲ್ಪಸಂಖ್ಯಾತ ಸಮುದಾಯಗಳು ತಿರುಗಿ ಬಿದ್ದರೆ ಕಾಂಗ್ರೆಸ್ಸಿಗೆ ನಷ್ಟ ಎಂಬುದಷ್ಟೇ ಸಿಎಂಗೆ ಇರುವ ಭಯ. ಹೀಗಾಗಿ, ಮತ್ತೊಮ್ಮೆ ಜಾಣ್ಮೆಯ ಹೆಜ್ಜೆ ಇಡಲು ಸಿದ್ಧರಾಮಯ್ಯ ಮುಂದಾಗಿದ್ದು ಅಡ್ಡಗೋಡೆ ಮೇಲೆ ದೀಪವಿಟ್ಟು ಲಿಂಗಾಯತರ ಒಲವು ಕಾಂಗ್ರೆಸ್ ಪರ ಉಳಿಯುವ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
-vv