ರಾಜ್ಯದಲ್ಲೂ ಶ್ರೀಲಂಕಾ, ಗೋವಾ ಮಾದರಿ ಕ್ಯಾಸಿನೋಗೆ ಅವಕಾಶ ಸರ್ಕಾರ ಚಿಂತನೆ
ಬೆಂಗಳೂರು: ಶ್ರೀಲಂಕಾ ಮಾದರಿಯ ಜೂಜು ಕೇಂದ್ರಗಳ (ಕ್ಯಾಸಿನೊ) ಆರಂಭಕ್ಕೆ ಅನುಮತಿ ನೀಡಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ರಾಜ್ಯಕ್ಕೆ ಬಂದ ಪ್ರವಾಸಿಗರು ಜೂಜಿನ ಸಲುವಾಗಿ ಗೋವಾ, ಇಲ್ಲವೆ ಶ್ರೀಲಂಕಾ ಕಡೆಗೆ ಮುಖ ಮಾಡುತ್ತಾರೆ. ಹೀಗಾಗಿ ವಿದೇಶಿಗರನ್ನು ಸೆಳೆದು, ಇಲಾಖೆಯ ಆದಾಯ ಹೆಚ್ಚಿಸಿಕೊಳ್ಳುವ ಹಿನ್ನೆಲೆಯಲ್ಲಿ ಜೂಜು ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಕಡೆ ಕ್ಯಾಸಿನೋ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ನೀಡುವುದಿಲ್ಲ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಆರಂಭಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ ಅವರು,
ಜೂಜು ಕೇಂದ್ರ ತೆರೆಯಲು ಪ್ರವಾಸೋದ್ಯಮ ಇಲಾಖೆ ಬಂಡವಾಳ ತೊಡಗಿಸುವುದಿಲ್ಲ ಬದಲಾಗಿ ಸರ್ಕಾರನೀತಿ ನಿಯಮಗಳನ್ನು ಮಾತ್ರ ರೂಪಿಸಲಿದೆ. ಆಸಕ್ತರು ಸರ್ಕಾರದಿಂದ ಅನುಮತಿ ಪಡೆದು ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗುವದು ಎಂದರು.
ಅಲ್ಲದೆ ಪ್ರಾಮುಖ್ಯವಾಗಿ ಜೂಜು ಕೇಂದ್ರಗಳನ್ನು ಆರಂಭಿಸುವ ಮುನ್ನ ಜನಸಾಮಾನ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಕೇಂದ್ರಗಳಿಗೆ ಅನುಮತಿ ನೀಡಲಾಗುವುದು. ಹಲವಾರು ಮುನ್ನೆಚ್ಚರಿಕೆ ಕ್ರಮಗಳ ನಂತರವೇ ಅವಕಾಶ ಕಲ್ಪಿಸಲಾಗುವದು ಎಂದು ವಿವರಿಸಿದರು.
ಈ ಯೋಜನೆ ಕಾರ್ಯಗತಗೊಳಿಸಿವದು ಕಷ್ಟಕರ ಆದಾಗ್ಯೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರವಾಸಿಗರನ್ನು ಆಕರ್ಷಿಸುವದು ಅನಿವಾರ್ಯ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯ ಆದಾಯ ಹೆಚ್ವಿಸಲು ಹೊಸ ಆಲೋಚನೆ ಮೂಲಕ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.