ಹಸನ್ಮುಖಿ ಭೀಮಯ್ಯಗೌಡ ಕಟ್ಟಿಮನಿ ಇನ್ನಿಲ್ಲ
ಬಿಜೆಪಿ ಹಿರಿಯ ನಾಯಕ ಭೀಮಯ್ಯಗೌಡ ಕಟ್ಟಿಮನಿ ನಿಧನ
ಶಹಾಪುರಃ ನಗರದ ಹಿರಿಯ ಹಳಿಪೇಠ ನಿವಾಸಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ, ಮಾಜಿ ಪುರಸಭೆ ಸದಸ್ಯ ಭೀಮಯ್ಯಗೌಡ ಕಟ್ಟಿಮನಿ ಇಂದು ಸೋಮವಾರ ಬೆಳಗಿನಜಾವ ಹೃದಯಘಾತದಿಂದ ನಿಧನರಾದರು ಎಂದು ತಿಳಿಸಲು ವಿಷಾಧಿಸುತ್ತೇವೆ.
ಇವರಿಗೆ 71 ವಯಸ್ಸಾಗಿತ್ತು. ಆದರೂ ಚಟುವಟಿಕೆಯಿಂದಲೇ ಓಡಾಡುತ್ತಿದ್ದ ಇವರನ್ನು, ಇಂದು ಬೆಳಗ್ಗೆ ವಿಧಿ ಕರೆದೊಯ್ದಿದೆ. ಸದಾ ಹಸನ್ಮುಖಿಯಾಗಿ ಜನರೊಡನೆ ಬೆರೆಯುತ್ತಿದ್ದ ಇವರು, ತಮ್ಮ ಹಾಸ್ಯ ಪ್ರಜ್ಞೆಯಿಂದ ಜನರನ್ನು ನಗೆಗಡಲಲ್ಲಿ ತೇಲಿಸುವ ನಡೆಯಿಂದ ಎಲ್ಲರಿಗೂ ಅಚ್ಚು ಮೆಚ್ಚಾಗಿದ್ದರು.
ನಗರದಲ್ಲಿ ಮಧ್ಯ ಮಾರಾಟ ಉದ್ಯಮ ನಡೆಸುತ್ತಿದ್ದು, ಅಪಾರ ಜ್ಞಾನ ಹೊಂದಿದ್ದ ಇವರು ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಈ ಹಿಂದೆ ಇವರ ಸಹೋದರ ದಿವಂಗತ ಹುಲಗಯ್ಯಗೌಡ ಕಟ್ಟಿಮನಿ ಶಹಾಪುರ ಮತಕ್ಷೇತ್ರದಿಂದ ವಿಧಾನ ಸಭೆಗೆ ಸ್ಪರ್ಧೆ ಮಾಡಿದ್ದರು. ಇವರ ಮನೆತನ ರಾಜಕೀಯ ಛಾಪು ಹೊಂದಿರುವ ಹಿನ್ನೆಲೆ ಸಮಾಜದಲ್ಲಿ ಗುರುತಿಸಿಕೊಂಡು ಬಂದಿದ್ದಾರೆ. ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.
ನಗರದ ಗಣ್ಯರಲ್ಲಿ ಒಬ್ಬರಾದ ಇವರು, ಯುವಕರೊಡನೆಯೂ ಉತ್ತಮ ಬಾಂಧವ್ಯ ಹೊಂದಿದ್ದರು. ಸಾಮಾಜಿಕ ಸ್ಥಾನಮಾನ ಪಡೆದುಕೊಂಡಿದ್ದರು. ತಮ್ಮ ವ್ಯಕ್ತಿತ್ವದಿಂದಲೇ ಬೆಳೆದು ಬಂದಿದ್ದ ಇವರು, ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು.
ಕಳೆದ ಬಾರಿ ನಗರದ ಪ್ರತಿಷ್ಠಿತ ಕೃಷ್ಣಾ ಪಟ್ಟಣ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಯಾವುದೇ ಪಕ್ಷದ ಬೆಂಬಲ ಪಡೆಯದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋಲನುಭವಿಸಿದ್ದರು.
ಅವರಲ್ಲಿ ಉತ್ತಮ ನಾಯಕತ್ವ ಗುಣವಿತ್ತು. ಜನರ ಸಮಸ್ಯೆಗಳಿಗೆ ಸದಾ ಸ್ಪಂಧಿಸುತ್ತಿದ್ದರು. ಸಹಾಯ ಸಹಕಾರ ನೀಡುವ ಮೂಲಕ ಜನರಲ್ಲಿ ಹೆಸರು ಮಾಡಿದ್ದರು. ಯಾವುದೇ ಬೇಧ ಭಾವವಿಲ್ಲದೆ ಎಲ್ಲರೊಡನೆ ಬೆರೆಯುತ್ತಿದ್ದರು.
ಮಾಜಿ ಶಾಸಕ ದಿ.ಶಿವಶೇಖರಪ್ಪ ಗೌಡ ಶಿರವಾಳ ಅವರ ಆಪ್ತರಾಗಿದ್ದ ಇವರು, ಪ್ರಸ್ತುತ ಅವರ ಪುತ್ರ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರ ಜೊತೆ ರಾಜಕೀಯವಾಗಿ ಸಲಹೆ ನೀಡುವ ಜೊತೆಗೆ ಅದೇ ಆಪ್ತತೆಯನ್ನು ಮುಂದುವರೆಸಿಕೊಂಡು ಬಂದಿದ್ದರು.
ಭೀಮಯ್ಯಗೌಡ ಕಟ್ಟಿಮನಿಯವರ ನಿಧನಕ್ಕೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕ ಗುರು ಪಾಟೀಲ್, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮುಖಂಡರಾದ ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಶರಣಪ್ಪ ಸಲಾದಪುರ, ಚಂದ್ರಶೇಖರ ಆರಬೋಳ, ಮಲ್ಲಣ್ಣ ಮಡ್ಡಿ, ಸುರೇಂದ್ರ ಪಾಟೀಲ್ ಮಡ್ನಾಳ, ಮಾಜಿ ನಗರ ಪ್ರಾಧಿಕಾರ ಅಧ್ಯಕ್ಷ ಗುರು ಕಾಮಾ, ವಸಂತಕುಮಾರ ಸುರಪುರಕರ್, ಬಸವರಾಜ ಆನೇಗುಂದಿ, ರಾಜಶೇಖರ ಗೂಗಲ್, ರಾಜು ಉಕ್ಕಿನಾಳ ಸೇರಿದಂತೆ ಇತರರು ಸಂತಾಪ ಸೂಚಿಸಿದ್ದಾರೆ.
ಇಂದು ಸಂಜೆ 04ಃ30 ಕ್ಕೆ ಅಂತ್ಯಕ್ರೀಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.