ವೀರಶೈವ-ಲಿಂಗಾಯತ ವಿಚಾರ ಹಿನ್ನೆಲೆ ಪಂಚಪೀಠಾಧೀಶರ ನೇತೃತ್ವದಲ್ಲಿ ಸಭೆ : ಬಿ.ಎಸ್.ವೈ ಹೇಳಿದ್ದೇನು?
ದಾವಣಗೆರೆ: ವೀರಶೈವ-ಲಿಂಗಾಯತ ವಿಚಾರ ಹಿನ್ನೆಲೆಯಲ್ಲಿ ನಗರದ ರೇಣುಕಾ ಮಂದಿರದಲ್ಲಿ ಇಂದು ಪಂಚಪೀಠಾಧೀಶರ ನೇತೃತ್ವದಲ್ಲಿ ಸಭೆ ನಡೆಯಿತು. ಪಂಚಪೀಠಾಧೀಶರು ಸೇರಿದಂತೆ ವಿವಿಧ ಪ್ರಮುಖ ಮಠಗಳ 30 ಕ್ಕೂ ಹೆಚ್ಚು ಮಠಾಧೀಶರು ಸಭೆಯಲ್ಲಿ ಭಾಗಿಯಾಗಿದ್ದು ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಮುಂದಿನ ನಡೆಯ ಬಗ್ಗೆ ಗಂಭೀರ ಸಮಾಲೋಚನೆ ನಡೆದಿದೆ ಎನ್ನಲಾಗಿದೆ. ಇದೇ ವೇಳೆ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೂ ರೇಣುಕಾ ಮಂದಿರಕ್ಕೆ ಆಗಮಿಸಿ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ.
ಸ್ವಾಮೀಜಿಗಳನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ.ಎಸ್.ಯಡಿಯೂರಪ್ಪ ವೀರಶೈವ ಮಹಾಸಭಾದ ಪರವಾಗಿ ನಾವಿದ್ದೇವೆ. ಆದರೆ, ಬಸವರಾಜ ಹೊರಟ್ಟಿ ಅವರು ಸ್ವಾರ್ಥ ಸಾಧನೆಗಾಗಿ ಬಿಜೆಪಿಯ ಕೆಲ ಶಾಸಕರು ನಮ್ಮೊಂದಿಗಿದ್ದಾರೆ ಎಂದು ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ನೇತೃತ್ವದ ವೀರಶೈವ ಮಹಾಸಭಾ ವೀರಶೈವ ಲಿಂಗಾಯತ ಎರಡೂ ಒಂದು ಎಂದು ಸ್ಪಷ್ಟಪಡಿಸಿದೆ. ನಾವೆಲ್ಲಾ ನಡೆದಾಡುವ ದೇವರು ಎಂದೇ ನಂಬಿರುವ ಸಿದ್ಧಗಂಗಾಶ್ರೀಗಳು ಅದೇ ಮಾತನ್ನು ಹೇಳಿದ್ದಾರೆ. ಹೀಗಾಗಿ, ನಾವು ಮಹಸಾಭಾ ಮತ್ತು ಸಿದ್ಧಗಂಗಾಶ್ರೀಗಳ ಪರವಾಗಿದ್ದೇವೆ ಎಂದು ಬಿ.ಎಸ್.ವೈ.ಸ್ಪಷ್ಟಪಡಿಸಿದ್ದಾರೆ.