ಪ್ರತಿ ಕುಟುಂಬಕ್ಕೆ 30 ಕೆಜಿ ಅಕ್ಕಿ ಉಚಿತ ಕೊಟ್ಟಿದ್ದು ಸಿದ್ರಾಮಯ್ಯ : ಚಿಂಚನಸೂರ
ಯಾದಗಿರಿಃ ಬಡವರ ಅಭಿವೃದ್ಧಿಗೆ ವಿವಿಧ ಯೋಜನೆ ಜಾರಿ
ಯಾದಗಿರಿಃ ಬಡವರಿಗಾಗಿ ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದು ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಚಿಂಚನಸೂರ ಹೇಳಿದರು.
ಶನಿವಾರ ಸಂಜೆ ಗುರುಮಠಕಲ್ ಮತಕ್ಷೇತ್ರದ ಚಾಮನಳ್ಳಿ ತಾಂಡದಲ್ಲಿ ಕೃಷ್ಣಾಭಾಗ್ಯ ಜಲ ನಿಗಮದಿಂದ 10 ಲಕ್ಷ ರೂಪಾಯಿ ಮೊತ್ತದಿಂದ ಎಸ್.ಸಿ.ಪಿ./ಎಸ್.ಟಿ.ಪಿ ಯೋಜನೆಯಡಿಯಲ್ಲಿ ಸಿ.ಸಿ.ರಸ್ತೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈಗಾಗಲೇ ಮತಕ್ಷೇತ್ರದ ತಾಂಡಗಳಿಗೆ 20 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರತಿಕುಟುಂಬಕ್ಕೆ 30 ಕೆ.ಜಿ. ಅಕ್ಕಿ ಉಚಿತವಾಗಿ ನೀಡುತ್ತಿರುವ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವ ಸರ್ಕಾರ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರರಿಗೂ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕೊಂಡಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬಂದಳ್ಳಿ ಗ್ರಾ.ಪಂ.ಅಧ್ಯಕ್ಷ ದೇವಿಬಾಯಿ ಪರಸುರಾಮ ಚವ್ಹಾಣ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಚಂದ್ರರಡ್ಡಿ ಬಂದಳ್ಳಿ, ತಾ.ಪಂ.ಅಧ್ಯಕ್ಷ ಬಾಷು ರಾಠೋಡ, ಮುಖಂಡರಾದ ಶರಣಗೌಡ ಅರಿಕೇರಿ, ವೀರಬಂದ್ರಪ್ಪ ಯಡ್ಡಳ್ಳಿ, ಹಣಮಂತಪ್ಪ, ಹಂಪಯ್ಯ ಅಲ್ಲಿಪೂರ, ಚಂದ್ರಕಾಂತ ಕಾವಲ್ದಾರ, ಹಣಮಂತ ದುಗನೂರ, ಬನ್ನಪ್ಪ ಕಣೇಕಲ ಇನ್ನಿತರರು ಇದ್ದರು.