ಕದ್ದಾಲಿಕೆ ಕೆಂಡ : ಕುತೂಹಲ ಕೆರಳಿಸಿದ ಮಾಜಿ ಪ್ರಧಾನಿ ದೇವೇಗೌಡರ ಸುದ್ದಿಗೋಷ್ಠಿ!
ಬೆಂಗಳೂರು : ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ದೆಹಲಿಯಿಂದ ನಿನ್ನೆ ಬೆಂಗಳೂರಿಗೆ ಬರುತ್ತಿದ್ದಂತೆಯೇ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹೆಚ್.ಡಿ.ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ನಡೆದ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಘೋಷಿಸಿದರು. ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸುವಂತೆ ಆಗ್ರಹಿಸಿದ ಕಾರಣಕ್ಕೆ ಉನ್ನತ ತನಿಖೆ ನೀಡುತ್ತಿರುವುದಾಗಿಯೂ ಸಿಎಂ ಹೇಳಿದ್ದರು.
ಫೋನ್ ಕದ್ದಾಲಿಕೆ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಯಡಿಯೂರಪ್ಪ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈಗಾಗಲೇ ಈ ಬಗ್ಗೆ ಪ್ರತಿಕ್ರಿಯಿಸಿ ಸಿಬಿಐ ಮಾತ್ರವಲ್ಲಿ ಅಮೇರಿಕಾ ಅದ್ಯಕ್ಷ ಟ್ರಂಪ್ ಗೆ ಹೇಳಿ ಅಂತರಾಷ್ಟ್ರೀಯ ಮಟ್ಟದ ತನಿಖೆ ಮಾಡಿಸಲಿ. ಕಳೆದ 15 ವರ್ಷದ ಫೋನ್ ಕದ್ದಾಲಿಕೆ ಪ್ರಕರಣಗಳನ್ನು ತನಿಖೆ ನಡೆಸಲಿ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇಂದು ಮದ್ಯಾನ 1ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದು ಭಾರೀ ಕುತೂಹಲ ಕೆರಳಿಸಿದೆ. ಕದ್ದಾಲಿಕೆ ಪ್ರಕರಣ ಸಿಬಿಐಗೆ ವಹಿಸುವ ನಿರ್ಧಾರ ಕೈಗೊಂಡಿರುವ ಬಿಜೆಪಿ ಅಸ್ತ್ರಕ್ಕೆ ದೇವೇಗೌಡರು ಪ್ರತ್ಯಾಸ್ತ್ರ ಹೂಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.