ಪತ್ರಕರ್ತ ಸುನೀಲ್ ಹತ್ಯೆಗೆ ಬೆಳಗೆರೆ ಸುಪಾರಿ ಕೇಸ್: ಸಿಂದಗಿಯಲ್ಲಿ ಸಿಸಿಬಿ ಟೀಮ್!
ಸಿಂದಗಿ: ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಹಾಯ್ ಬೆಂಗಳೂರ್ ಪತ್ರಿಕೆ ಗೌರವ ಸಂಪಾದಕ ರವಿ ಬೆಳಗೆರೆ ಸುಪಾರಿ ನೀಡಿದ್ದರು. ವಿಜು ಬಡಿಗೇರ್ ಮತ್ತು ನಾನು ಸುನೀಲ್ ಹತ್ಯೆಗೆ ಯತ್ನಿಸಿದ್ದೆವು ಎಂದು ಭೀಮಾ ತೀರದ ಹಂತಕ ಶಶಿಧರ್ ಮುಂಡೆವಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪರಿಣಾಮ ಈಗಾಗಲೇ ಕೊಲೆ ಯತ್ನ ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗಿ ರವಿ ಬೆಳಗೆರೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಕರಣದ ಮೂರನೇ ಆರೋಪಿ ವಿಜು ಬಡಿಗೇರ್ ನಾಪತ್ತೆಯಾಗಿದ್ದಾನೆ.
ವಿಜು ಬಡಿಗೇರ್ ಪತ್ತೆಗಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಕಳೆದ ಎರಡು ದಿನಗಳಿಂದ ಭೀಮಾತೀರದಲ್ಲಿ ಬೀಡು ಬಿಟ್ಟಿರುವ ಸಿಸಿಬಿ ಟೀಮ್ ವಿಜು ಬಡಿಗೇರ್ ಪರಿಚಿತರಿಬ್ಬರಿಂದ ವಿಜು ಮನೆಯನ್ನು ಪತ್ತೆ ಹಚ್ಚಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಕಂಟೆಪ್ಪನ ಪ್ಲಾಟ್ ನಲ್ಲಿರುವ ವಿಜು ಬಡಿಗೇರ್ ಮನೆಗೆ ಸಿಸಿಬಿ ಪೊಲೀಸರು ಭೇಟಿ ನೀಡಿದ್ದಾರೆ. ವಿಜು ಬಡಿಗೇರ್ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ವಿಜು ಬಡಿಗೇರ್ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.