ಗುಜರಾತ್ ಚುನಾವಣೇಲಿ ಮತ್ತೆ ‘ಚಹಾ ಮಾರಾಟ’ ಮಾಡಿದ ಮೋದಿ!
ಕಳೆದ ಚುನಾವಣೆ ಸಂದರ್ಭದಲ್ಲಿ ಮಣಿಶಂಕರ್ ಅಯ್ಯರ್ ಅವರು ನರೇಂದ್ರ ಮೋದಿ ಚಹಾ ಮಾರಿದವರು. ಅವರು ಪ್ರಧಾನಿ ಆಗಲಾರರು, ಆದ್ರೆ, ಕಾಂಗ್ರೆಸ್ಸಿಗರಿಗೆ ಚಹಾ ಮಾರಲು ಬರಬಹುದು ಎಂದು ವ್ಯಂಗವಾಡಿದ್ದರು. ಅದನ್ನೇ ರಾಜಕೀಯ ದಾಳವಾಗಿ ಬಳಸಿಕೊಂಡಿದ್ದ ಬಿಜೆಪಿ ಚಾಯ್ ಪೇ ಚರ್ಚಾ ಎಂಬ ಹೊಸ ಅಭಿಯಾನವನ್ನೇ ಶುರು ಮಾಡಿತ್ತು. ಆ ಮೂಲಕ ನರೇಂದ್ರ ಮೋದಿ ಬಡತನದಿಂದ ಬಂದವರು, ಅವರಿಗೆ ಬಡತನದ ಅರಿವಿದೆ ಎಂಬುದನ್ನು ಸಾರಿ ಹೇಳುತ್ತ ವಿಪಕ್ಷ ನಾಯಕರ ಚಹಾದ ಹೇಳಿಕೆಯನ್ನೇ ಅಧಿಕಾರಕ್ಕೇರಲು ಮೆಟ್ಟಿಲು ಮಾಡಿಕೊಂಡಿತ್ತು.
ಇದೀಗ ನರೇಂದ್ರ ಮೋದಿ ಗುಜರಾತ್ ಚುನಾವಣೆ ವೇಳೆ ಮತ್ತೆ ಚಹಾ ಮಾರಾಟದ ದಾಳವನ್ನು ಉರುಳಿಸಿದ್ದಾರೆ. ರಾಜಕೋಟ್ ನಲ್ಲಿಂದು ಚುನಾವಣ ಭಾಷಣ ಮಾಡಿದ ಅವರು ನಾನು ಬಡತನದಿಂದ ಬಂದವನು. ಬದುಕಿಗಾಗಿ ಚಹಾ ಮಾರಿದ್ದೇನೆ ಹೊರತು ದೇಶವನ್ನು ಮಾರಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಗುಜರಾತ್ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಚಹಾದ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಚಹಾವನ್ನು ಮತ ಸೆಳೆಯುವ ಸರಕನ್ನಾಗಿ ಬಳಸಿಕೊಂಡಿದ್ದಾರೆ. ಅಂತೆಯೇ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ ಕಾಂಗ್ರೆಸ್ ಪಕ್ಷದಲ್ಲಿ ನೀತಿಯೂ ಇಲ್ಲ, ನೀಯತ್ತೂ ಇಲ್ಲ ಮತ್ತು ನಾಯಕನೂ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ‘ಚಹಾ ಮಾರಾಟ’ ತಂತ್ರ ಎಷ್ಟರ ಮಟ್ಟಿಗೆ ಫಲಿಸಲಿದೆ. ಗುಜರಾತಿನ ಮತದಾರರು ಮೋದಿ ಮಾತಿಗೆ ಮರುಳಾಗಿ ಮತ್ತೆ ಚಹಾ ಕುಡಿಯಲಿದ್ದಾರೆಯೇ. ಅಥವಾ ಕಾಂಗ್ರೆಸ್ಸಿನ ಕೈ ಹಿಡಿದು ಬಿಜೆಪಿಗೆ ನೀರು ಕುಡಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.