ಪ್ರಮುಖ ಸುದ್ದಿಸಾಹಿತ್ಯ

ಸಾಹಿತ್ಯದಲ್ಲಿ “ಚಂದ್ರ ಕಾಂತಿ” ಬೀರಿದ ಕರದಳ್ಳಿ

ಸಗರನಾಡಿನ ಸಂಪ್ರೀತಿ ಸಾಹಿತಿ ಕರದಳ್ಳಿಗೆ ರಾಜ್ಯೋತ್ಸವ ಪಶಸ್ತಿ

1 ವರ್ಷ 2 ಮಹತ್ವದ ಪ್ರಶಸ್ತಿಗೆ ಭಾಜನ ಕರದಳ್ಳಿ

ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿ,ಶಹಾಪುರಃ ಸಾಹಿತ್ಯ ವಲಯದಲ್ಲಿ ಸದಾ ಸಂಪ್ರೀತಿಯ ನಗುವಿನೊಂದಿಗೆ ಚಕ್ಕ ಚೊಕ್ಕವಾಗಿ ಡ್ರೆಸ್ ಮಾಡಿಕೊಂಡು ಶಿಸ್ತಿನ ಸಿಪಾಯಿಯಂತೆ ಕಾಣುವ, ಯುವ ಬರಹಗಾರರಿಗೆ ದಿಕ್ಸೂಚಿಯಾಗಿ ಸಾಹಿತ್ಯದಲ್ಲಿ ಚಂದ್ರನಂತೆ ಬೆಳಕು ಚಲ್ಲಿದ ಸಾಹಿತಿ ಚಂದ್ರಕಾಂತ ಕರದಳ್ಳಿಯವರು 2019ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವದು ಸಗರನಾಡಿನ ಸಾಹಿತ್ಯವಲಯದಲ್ಲಿ ಸಂತಸ ಹಿಮ್ಮಡಿಸಿದೆ.

ಇತ್ತೀಚೆಗೆ ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿವತಿಯಿಂದ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕøತರಾದ ಇವರು, ಇದೀಗ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವದ ಸುದ್ದಿ ತಿಳಿಯುತ್ತಿದ್ದಂತೆ ಸಗರನಾಡಿನ ಸಾಹಿತ್ಯ ವಲಯದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ.

ಸಗರನಾಡಿನ ಹಾಗೂ ಹೈದ್ರಾಬಾದ ಕರ್ನಾಟಕದ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಯಾದಗಿರಿ ಜಿಲ್ಲೆಯ ಶಹಾಪುರದ ಚಂದ್ರಕಾಂತ ಕರದಳ್ಳಿ ಅವರು ನಾಡಿನ ಸಾಹಿತ್ಯ ಹಾಗೂ ಸಾಂಸ್ಕøತಿಕ ವಲಯದಲ್ಲಿ ಮಕ್ಕಳ ಸಾಹಿತಿ ಎಂದೇ ಸುಪರಿಚಿತರು.

ಇವರು 1952 ಆಗಸ್ಟ 25ರಂದು ರಾಚಯ್ಯಸ್ವಾಮಿ ಕರದಳ್ಳಿ ಮತ್ತು ಮುರಿಗೆಮ್ಮ ದಂಪತಿಗಳ ಉದರದಲ್ಲಿ ಜನಸಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್.ಪದವಿ ಪಡೆದು ಶಿಕ್ಷಕರಾಗಿ ಸರಕಾರಿ ಸೇವೆಗೆ ನೇಮಕಗೊಂಡು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಂತರ ಪ್ರೌಢಶಾಲಾ ಶಿಕ್ಷಕರಾಗಿ 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದಾರೆ.

ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕರದಳ್ಳಿ ಅವರ ವಿಶಿಷ್ಠ ಛಾಪು ಮೂಡಿಸಿದ್ದಾರೆ. ಮಕ್ಕಳ ಸಾಹಿತ್ಯಕ್ಕೆ 25 ಮೌಲಿಕ ಕೃತಿಗಳನ್ನು ನೀಡಿದ ಕರದಳ್ಳಿ ಅವರು, ಮಕ್ಕಳ ಸಾಹಿತ್ಯಕ್ಕೆ ಹೊಸ ಆಯಾಮವನ್ನು ನಿರ್ಮಿಸಿದ್ದಾರೆ. ಮತ್ತು ಪ್ರೌಢ ಸಾಹಿತ್ಯದಲ್ಲಿ ಸಂಪಾದನೆಯನ್ನೊಳಗೊಂಡು 25 ಕೃತಿಗಳನ್ನು ಹೊರ ತಂದಿದ್ದಾರೆ.

ಸಗರಾದ್ರಿಯ ಸಾಂಸ್ಕøತಿಕ ಪರಂಪರೆಯ ನೆಲದಲ್ಲಿ ಸಾಹಿತ್ಯ ಕೃಷಿಯ ವೈವಿಧ್ಯಮಯವಾದ ಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಕರದಳ್ಳಿ ಅವರು ಮಕ್ಕಳ ಸಂವೇದನೆಗಳೊಂದಿಗೆ ಕಾವ್ಯ, ಕಥೆ, ಕಾದಂಬರಿ, ಶಿಶು ಪ್ರಾಸಗಳು, ಒಗಟುಗಳು, ಸಂಪಾದನೆ, ಭಾಷಣಗಳು, ಪ್ರವಾಸ ಕಥನ, ಚೌಪಾದಿಗಳು ಹೀಗೆ ಬೇರೆ ಬೇರೆ ವಲಯಗಳಲ್ಲಿ ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ.

ವಿಷಯ ವೈವಿಧ್ಯತೆಯಲ್ಲಿ, ಪ್ರಯೋಗಶೀಲತೆಯಲ್ಲಿ, ಶೈಲಿಯ ಕಲೆಗಾರಿಕೆಯಲ್ಲಿ ತಮ್ಮದೇ ಆದ ವೈಶಿಷ್ಟತೆಯನ್ನು ತೋರಿದ್ದಾರೆ. ಪ್ರೌಢಸಾಹಿತ್ಯದಲ್ಲಿ ವೈಚಾರಿಕ ಲೇಖನಗಳು, ಚಿಂತನಗಳು, ಜೀವನ ಚರಿತ್ರೆಗಳು, ಸಂಪಾದನೆಗಳು, ಸ್ಮರಣ ಗ್ರಂಥಗಳು, ವಚನ ವ್ಯಾಖ್ಯಾನ, ವಚನ ಸಾಹಿತ್ಯ, ಶರಣ ಸಾಹಿತ್ಯ, ಹೀಗೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಅವರು ನಾಡಿನ ಸಾರಸ್ವತ ಲೋಕಕ್ಕೆ ಒಟ್ಟು 50 ಕೃತಿಗಳನ್ನು ಅರ್ಪಿಸಿದ್ದಾರೆ.

ಕರದಳ್ಳಿ ರಚಿಸಿದ ಮಕ್ಕಳ ಕೃತಿಗಳುಃ
ಮಕ್ಕಳ ಕವನ ಸಂಕಲನಗಳು: ನಲಿದಾಡು ಬಾ ನವಿಲೆ, ಪುಟ್ಟನ ಕನಸು, ನಮ್ಮ ಹಳ್ಳಿ ನಮಗೆ ಚೆಂದ, ಚಂದಮಾಮ ಒಬ್ಬನೆ ಇದ್ದೀಯಾ..? ಮಂಗಳ ಗ್ರಹದಲ್ಲಿ ಮನೆ ಮನೆ (ಅಚ್ಚಿನಲ್ಲಿ)

ಕಥೆಗಳು: ಮಕ್ಕಳಿಗಾಗಿ ಸಣ್ಣ ಕಥೆಗಳು, ಮಾವಿನ ಮರ ಬೆಳೆದದ್ದು ಹೀಗೆ, ಉಪ್ಪಿನಗೊಂಬೆಯ ಹುಟ್ಟೂರು, ಆಕಾಶವೇಕೆ ಮೇಲಿದೆ ? ಕುರುಡ ಮತ್ತು ಕಂದೀಲು ಮತ್ತು ಇತರ ಕಥಗಳು

ಕಾದಂಬರಿಗಳು: ಬಯಲು ಸೀಮೆಯಿಂದ ಕರಾವಳಿಗೆ ಮಹಾಜಿಪುಣ ಮೈದಾಸ, ಉಪ್ಪಿನ ಗೊಂಬೆ, ಮಾಯದ ಗಂಟೆ, ಸಗರಾದ್ರಿ ಚಾರಣ ಕಾಡು ಕನಸಿನ ಬೀಡಿಗೆ, ಶಿಶುಪ್ರಾಸಗಳು: ಆನೆ ಬಂತು ಆನೆ, ಗಾಡಿ ಬಂತು ಗಾಡಿ, ನೂರೊಂದು ಹೊಸ ಒಗಟುಗಳು ಪ್ರವಾಸ ಕಥನ: ಕೊಡಗಿನ ಬೆಡಗು ಮತ್ತು ಮಲೆಯ ಮಹದೇಶ್ವರ, ಸಗರಾದ್ರಿ ಚಾರಣ, ಕಾಡು ಕನಸಿನ ಬೀಡಿಗೆ ಮುಂತಾದವು.

ಪ್ರೌಢ ಸಾಹಿತ್ಯದ ಕೃತಿಗಳು: ವಿಚಾರ ತರಂಗ, ಮನದಾಳದ ಮಾತುಗಳು, ನುಡಿಯ ಬೆಡಗು, ಲಿಂಗಣ್ಣ ಸತ್ಯಂಪೇಟೆ, ಬಿಸಿಲು ಬದುಕಿನ ಮಧ್ಯೆ, ಬಿ.ಮಹಾದೇವಪ್ಪನವರು, ನಡೆದ ದಾರಿಯ ನೋಟ, ಶಹಾಪುರ ತಾಲ್ಲೂಕಿನ ದರ್ಶನ, ವಚನ ವ್ಯಾಖ್ಯಾನ ಮುಂತಾದವು.

ಶಿಕ್ಷಣ ಹಾಗೂ ಸಾಹಿತ್ಯ ಸೇವೆಗೆ ಸಂದ ಪ್ರಶಸ್ತಿಗಳು:
‘ಉತ್ತಮ ಶಿಕ್ಷಕ’ ರಾಜ್ಯ ಪ್ರಶಸ್ತಿ, ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಶಿಕ್ಷಣ ಸಿರಿ ಪ್ರಶಸ್ತಿ, ಸಾಕ್ಷಿ ಮಕ್ಕಳ ಸಾಹಿತ್ಯ ಪ್ರಶಸ್ತಿ, ಸಿಸು ಸಂಗಮೇಶ ದತ್ತಿ ಪ್ರಶಸ್ತಿ, ಸಿದ್ಧಾರ್ಥ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಕ್ಕಳ ಚಂದಿರ ಪ್ರಶಸ್ತಿ ಹೀಗೆ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಗೌರವಕ್ಕೆ ಭಾಜನರಾಗಿರುವ ಚಂದ್ರಕಾಂತ ಕರದಳ್ಳಿ ಅವರು, ಶಹಾಪುರ ತಾಲ್ಲೂಕಾ ಪ್ರಥಮ ಸಾಹಿತ್ಯ ಸಮ್ಮೇಳನದ ಹಾಗೂ ಯಾದಗಿರಿ ಜಿಲ್ಲಾ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಾಡಿನ ತಾಲ್ಲೂಕಾ, ಜಿಲ್ಲಾ, ರಾಜ್ಯಮಟ್ಟದ ಅನೇಕ ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕವಿತೆಗಳು, ಚಿಂತನೆಗಳು, ವಿಮರ್ಶೆಗಳು ಮಂಡಿಸಿದ್ದಾರೆ. ಗುಲಬರ್ಗಾ ಆಕಾಶವಾಣಿಯಿಂದ ನೂರಾರು ಚಿಂತನೆಗಳು ಬಿತ್ತರವಾಗಿವೆ.

—————–
ಹೈದ್ರಾಬಾದ ಕರ್ನಾಟಕದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯಿಂದ ಬಾಲಸಾಹಿತ್ಯ ಪ್ರಶಸ್ತಿ ಪಡೆದ ಮೊದಲಿಗರಾಗಿರುವುದು ಮತ್ತು ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿರುವುದು ಹೈದ್ರಬಾದ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ. ಬತ್ತದ ಜೀವನೋತ್ಸಾಹ, ಅದಮ್ಯ ಜೀವನ ಪ್ರೀತಿಯೊಂದಿಗೆ ಸದಾ ಚೈತನ್ಯಶೀಲರಾಗಿ ಚಟುವಟಿಕೆಯಿಂದ ನಿರಂತರ ಅಧ್ಯಯನ, ಸಾಹಿತ್ಯ ಬರಹಗಳಲ್ಲಿ ತೊಡಗಿಸಿಕೊಂಡಿರುವ ಚಂದ್ರಕಾಂತ ಕರದಳ್ಳಿ ಅವರು ಇನ್ನೂ ಹೆಚ್ಚು ಮೌಲಿಕ ಕೃತಿಗಳಿಂದ ನಾಡಿಗೆ ವಿಶಿಷ್ಟ ಕೊಡುಗೆ ನೀಡಲಿ ಎಂದು ಆಶಿಸುತ್ತೇನೆ.

-ರಾಘವೇಂದ್ರ ಹಾರಣಗೇರಾ.
ಉಪನ್ಯಾಸಕರು, ಲೇಖಕರು.

Related Articles

Leave a Reply

Your email address will not be published. Required fields are marked *

Back to top button