ಚಂಡು ಮದುವೆ ಕರೆಯೋಲೆಗೆ ಬಿತ್ತು ನೀತಿ ಸಂಹಿತೆ ಗುಂಡು
ಮದುವೆ ಆಮಂತ್ರಣಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ
ಕರೆಯೋಲೆಯನ್ನು ತಹಸೀಲ್ ಕಚೇರಿಗೆ ಒಪ್ಪಿಸಿದ ಕುಟುಂಬ
ಯಾದಗಿರಿ, ಶಹಪುರಃ ಇದೇ ಮಾರ್ಚ್ 24 ರಂದು ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಚಂಡು ಕುಟುಂಬದಲ್ಲಿ ಸಹೋದರರಿಬ್ಬರು ಮದುವೆ ನಿಶ್ಚಯಿಸಿದ್ದು, ಮದುವೆಯ ಕರೆಯೋಲೆಯಲ್ಲಿ ಮೋದಿಯವರನ್ನು ಗೆಲ್ಲಿಸಿ ದೇಶ ಉಳಿಸಿ ಇದುವೇ ನೀವು ನಮಗೆ ಕೊಡುವ ಉಡುಗೊರೆ ಎಂದು ಮುದ್ರಿಸಿ ಕಳೆದ ಹದಿನೈದು ದಿನದಿಂದ ಎಲ್ಲಡೆ ಹಂಚಲಾಗುತಿತ್ತು.
ಆದರೆ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ರವಿವಾರ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಮದುವೆ ಕರೆಯೋಲೆ ಮೂಲಕ ಮೋದಿ ಪರ ಪ್ರಚಾರ ನಡೆಸುತ್ತಿರುವ ಬಿಜೆಪಿ ಯುವ ಮುಖಂಡ ಹಾಗೂ ವರ ಬಸವರಾಜ ಅವರು ಸೋಮವಾರ ಇನ್ನೂ ಉಳಿದ 66 ಕರೆಯೋಲೆಗಳನ್ನು ತಹಸೀಲ್ದಾರ ಸಂಗಮೇಶ ಜಿಡಗಾ ಅವರಿಗೆ ಸ್ವಯಂ ಪ್ರೇರಣೆಯಾಗಿ ಒಪ್ಪಿಸುವ ಮೂಲಕ ಮೋದಿಪರ ಪ್ರಚಾರದ ಮದುವೆ ಆಮಂತ್ರಣ ಪತ್ರಗಳನ್ನು ಚಂಡು ಫ್ಯಾಮಿಲಿ ಹಂಚುವದನ್ನು ನಿಲ್ಲಿಸುವ ಮೂಲಕ ನೀತಿ ಸಂಹಿತೆ ಪಾಲಿಸುವ ಮೂಲಕ ಔದಾರ್ಯವನ್ನು ಮೆರೆದಿದ್ದಾರೆ.
ಸ್ವಯಂ ಪ್ರೇರಣೆ ಮೂಲಕ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ತಮ್ಮಲ್ಲಿ ಉಳಿದಿದ್ದ ಮದುವೆ ಆಮಂತ್ರಣ ಪತ್ರಗಳನ್ನು ತಹಶೀಲ್ದಾರರಿಗೆ ಒಪ್ಪಿಸುವ ಮೂಲಕ ವರನ ಸಹೋದರ ಹಾಗೂ ಕುಟುಂಬಸ್ಥರು ನೀತಿ ಸಂಹಿತೆ ಪಾಲನೆ ಮಾಡಿದ್ದಾರೆ.
ಅಲ್ಲದೆ ಮೋದೀಜಿ ಅಭಿಮಾನಿಗಳಾದ ವರ ಸಹೋದರರು ಹಾಗೂ ಫ್ಯಾಮಿಲಿ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಮಾಜಿ ಸಚಿವ, ಶಾಸಕ ರಾಜೂಗೌಡ ಸುರಪುರ ಮತ್ತು ಸಾಧ್ವಿ ನಿರಂಜನ ಜ್ಯೋತಿ ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸೇರಿದಂತೆ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರ ಭಾವಚಿತ್ರ ಸಹ ಮದುವೆಯ ಪತ್ರದಲ್ಲಿ ಅಚ್ಚು ಕಟ್ಟು ಮುದ್ರಿಸಿ ಬಿಜೆಪಿ ಪರ ಪ್ರಚಾರವನ್ನು ಕೈಗೊಂಡಿದ್ದರು ಎನ್ನಲಾಗಿದೆ. ಆದರೆ ಇವರ ವಿಶಿಷ್ಟ ಪ್ರಚಾರಕ್ಕೆ ನೀತಿ ಸಂಹಿತೆ ಬಿಸಿ ಮುಟ್ಟಿಸಿದೆ ಎನ್ನಬಹುದು.
—————————————————–
ಕಳೆದ ಹದಿನೈದು ದಿನದಿಂದ ಚಂಡು ಕುಟುಂಬಸ್ಥರು ತಮ್ಮ ಮನೆಯಲ್ಲಿ ಮಕ್ಕಳ ಮದುವೆ ನಿಶ್ಚಿಯಸಿರುವ ಹಿನ್ನೆಲೆಯಲ್ಲಿ ಕರೆಯೋಲೆ ಮುದ್ರಿಸಿದ್ದು, ಅದರಲ್ಲಿ ಮೋದಿ ಗೆಲ್ಲಿಸಿ ದೇಶ ಉಳಿಸಿ ಎಂದು ಪ್ರಚಾರವು ಸಹ ನಡೆಸಿದ್ದರು. ಪ್ರಸ್ತುತ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚಂಡು ಕುಟುಂಬಸ್ಥರು ಸೋಮವಾರ ಉಳಿದಿದ್ದ 66 ಮದುವೆ ಪತ್ರಗಳ ಸಮೇತ ಅರ್ಜಿಯಲ್ಲಿ ಬರೆದು ನಮ್ಮ ಸುಪರ್ದಿಗೆ ಒಪ್ಪಿಸಿದ್ದಾರೆ.
ಅಲ್ಲದೆ ನೀತಿ ಸಂಹಿತೆ ಹಿನ್ನೆಲೆ ಪ್ರಸಕ್ತ ಉಳಿದಿದ್ದ ಮದುವೆ ಕರೆಯೋಲೆಗಳನ್ನು ತಮ್ಮ ಸುಪರ್ದಿಗೆ ಒಪ್ಪಿಸುತ್ತಿದ್ದೇವೆ ಎಂದು ಮನವಿ ಪತ್ರದಲ್ಲಿ ಬರೆದು ಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಸ್ವತಹಃ ತಂದು ಒಪ್ಪಿಸಿರುವ ಕಾರಣ ಸೀಜ್ ಮಾಡಿದ್ದೇವೆ ಎಂದು ಹೇಳಲು ಬರುವದಿಲ್ಲ.
–ಸಂಗಮೇಶ ಜಿಡಗ, ತಹಶೀಲ್ದಾರ.
————————————————-
ಮೋದಿಜಿ ದೇಶಕ್ಕೆ ಅನಿವಾರ್ಯ. ಮೋದಿಜಿಯವರ ಅಭಿಮಾನಿಗಳಾಗಿದ್ದ ನಾವೆಲ್ಲ ಮದುವೆ ಆಮಂತ್ರಣ ಮೂಲಕವು ಮೋದಿ ಗೆಲ್ಲಿಸಿ ದೇಶ ಉಳಿಸಿ ಇದುವೆ ನೀವು ಕೊಡುವ ಉಡುಗೊರೆ ಎಂದು ಮುದ್ರಿಸಿ ಉತ್ಸಾಹದಿಂದ ಹಂಚಿಕೆ ಮಾಡುತ್ತಿದ್ದೇವು. ಆದರೆ ಚುನಾವಣೆ ನೀತಿ ಸಂಹಿತೆ ಅಡ್ಡ ಬಂದ ಪರಿಣಾಮ. ಮೋದಿಜೀ ಭಾವಚಿತ್ರದೊಂದಿಗೆ ಪ್ರಕಟಿಸಿದ್ದ ಮದುವೆ ಕರೆಯೋಲೆಗಳ ಹಂಚುವಿಕೆ ನಿಲ್ಲಿಸಿದ್ದೇವೆ. ಉಳಿದ ಕರೆಯೋಲೆಗಳನ್ನು ತಹಶೀಲ್ದಾರರ ಸುಪರ್ದಿಗೆ ನಾವೇ ಸ್ವತಃ ಒಪ್ಪಿಸಿದ್ದೇವೆ.
–ಆಂಜನೇಯ ಚಂಡು. ವರನ ಸಹೋದರ.