ಶಹಾಪುರಃ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ
ಅಧ್ಯಕ್ಷರಾಗಿ ವೀರಣ್ಣ, ಉಪಾಧ್ಯಕ್ಷರಾಗಿ ಸಂತೋಷ ಅವಿರೋಧ ಆಯ್ಕೆ
ಬಿಜೆಪಿ ಬೆಂಬಲಿತ ಅಧ್ಯಕ್ಷ, ಜೆಡಿಎಸ್ ಬೆಂಬಲಿತ ಉಪಾಧ್ಯಕ್ಷ ಆಯ್ಕೆ
ಶಹಾಪುರಃ ಸೋಮವಾರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ವೀರಣ್ಣ ಸಾಹು ತಡಿಬಿಡಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಂತೋಷಕುಮಾರ ನಿರ್ಮಲಕರ್ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದವು. ಹೀಗಾಗಿ ಸುಲಭವಾಗಿ ಅವಿರೋಧ ಆಯ್ಕೆ ನಡೆಯಿತು ಎನ್ನಬಹುದು. ತಹಶೀಲ್ದಾರ ಜಗನ್ನಾಥರಡ್ಡಿ ಚುನಾವಣೆ ಅಧಿಕಾರಿಯಾಗಿ ಆಗಮಿಸಿದ್ದು, ಚುನಾವಣೆ ಪ್ರಕ್ರಿಯದಂತೆ ನಾಮಪತ್ರ ಪರಿಶೀಲನೆ ನಡೆಸಿ ಸಿಂಧುಗೊಳಿಸಿದರು. ಎರಡು ಸ್ಥಾನಗಳಿಗೆ ತಲಾ ಒಬ್ಬರೆ ನಾಮಪತ್ರ ಸಲ್ಲಿಕೆಯಾಗಿರುವ ಹಿನ್ನೆಲೆ ಸುಲಭವಾಗಿ ಅವಿರೋಧವಾದ ಅಭ್ಯರ್ಥಿಗಳ ಹೆಸರುಗಳನ್ನು ಅವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸಂತೋಷಕುಮಾರ ಮುದ್ದಾ, ಪಿಎಸ್‍ಐ ಚಂದ್ರಕಾಂತ ಮೆಕಾಲೆ ಇದ್ದರು. ಸಮಿತಿಯ ಸರ್ವ ಸದಸ್ಯರು ಹಾಜರಿದ್ದು, ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಬಿಜೆಪಿ ಕಚೇರಿಯಲ್ಲಿ ನೂತನ ಅಧ್ಯಕ್ಷರಿಗೆ ಸನ್ಮಾನ
ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೀರಣ್ಣ ಸಿದ್ದಪ್ಪ ಸಾಹು, ಅವರು ತಮ್ಮ ಗೆಲುವಿಗೆ ಕಾರಣಿಭೂತರಾದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳರನ್ನು ಭೇಟಿ ಮಾಡಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಮಾಜಿ ಶಾಸಕ ಶಿರವಾಳ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಸನ್ಮಾನಿಸಿದರು. ಈ ವೇಳೆ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಡಾ.ಚಂದ್ರಶೇಖರ ಸುಬೇದಾರ ಸೇರಿದಂತೆ ಬಿಜೆಪಿ ಮುಖಂಡರು ಕಾರ್ಯಕರ್ತರು ಇದ್ದರು.