ಬಸವಭಕ್ತಿ

ಕಾಯಕಯೋಗಿ ಜಾತ್ರೆ : ಯಾರೆಂದು ಬಣ್ಣಿಸಲಿ ಅಯ್ಯ ಚರಬಸವ ತಾತ…

-ಮಲ್ಲಿಕಾರ್ಜುನ ಮುದನೂರ್

ಬಲಭಾಗದಲ್ಲಿ ಸಿದ್ದಲಿಂಗೇಶ್ವರ ಬೆಟ್ಟ, ಎಡಭಾಗದಲ್ಲಿ ಶೀಲವಂತೇಶ್ವರ ಗುಡಿ. ಹಿಂಭಾಗದಲ್ಲಿ ಬುದ್ಧ ಮಲಗಿದ ಬೆಟ್ಟಕ್ಕೆ ಕಾಡುದಾರಿ, ಮುಂಭಾಗದಲ್ಲಿ ನಾಗರಕೆರೆ ಅಂಗಳ. ಸೊಬಗಿನ ಸಗರಾದ್ರಿಯ ಮಡಿಲಲ್ಲಿ ಶಹಾಪುರದ ಮಹಾತ್ಮ ಚರಬಸವೇಶ್ವರರ ಭವ್ಯ ದೇಗುಲ. ಕಣ್ಮನ ಸೆಳೆಯುವ ಅಮೃತಶಿಲೆಯ ಚರಬಸವೇಶ್ವರ ವಿಗ್ರಹ ಅದೆಂಥವರಲ್ಲೂ ಏಕಾಗ್ರತೆ ತರುತ್ತದೆ. ಲೌಕಿಕ ಜಂಜಾಟಗಳು ಮರೆಯಾಗಿ ಸದ್ಭಾವ, ಸಮಾಧಾನ ಮೂಡುತ್ತದೆ. ಇದು ಚರಬಸವೇಶ್ವರ ಮಹಾತ್ಮೆ!

ಶರಣರ ಭೂಮಿ ಎಂದೇ ಖ್ಯಾತಿವೆತ್ತ ಸಗರನಾಡಿನಲ್ಲಿ ಅನೇಕ ಶರಣರು, ಸಂತರು, ಸೂಫಿಗಳು ಜನ್ಮ ತಾಳಿದ್ದಾರೆ. ಆ ಪೈಕಿ ಚರಬಸವೇಶ್ವರರು ಅಗ್ರಗಣ್ಯರು. ಶಹಾಪುರ ತಾಲ್ಲೂಕಿನ ಅನವಾರ ಗ್ರಾಮದ ಶರಣ ದಂಪತಿ ಅವ್ವಮ್ಮ- ಶೀಲವಂತಯ್ಯ ಉದರದಲ್ಲಿ ಜನಿಸಿದ ‘ಬಸ್ಸಯ್ಯ ಮುತ್ಯಾ’ ಅವರೇ ಮಹಾತ್ಮ ಚರಬಸವೇಶ್ವರರು. ಜವಳಿ ವ್ಯಾಪಾರದ ಕಾಯಕದಲ್ಲಿ ತೊಡಗಿದ ಬಸ್ಸಯ್ಯ ಮುತ್ಯಾ ಅವರು ಶಹಾಪುರದಲ್ಲಿ ನೆಲೆಸಿದರು. ವ್ಯಾಪರಾದ ಗಳಿಕೆಯ ಹಣವನ್ನು ಸಮಾಜ ಸೇವೆಗೆ ಬಳಸಿದರು. ಆ ಮೂಲಕ ಕಾಯಕ ಮತ್ತು ದಾಸೋಹದ ಸಂದೇಶ ಸಾರಿದ್ದರು.

ಪರಿವರ್ತನೆಯ ಮೇಲೆ ನಂಬಿಕೆಯಿಟ್ಟಿದ್ದ ಚರಬಸವೇಶ್ವರರು ಒಮ್ಮೆ ಸೀರೆ ಕದ್ದಿದ್ದ ಕಳ್ಳನಿಗೆ ರಕ್ಷಣೆ ನೀಡಿದ್ದರು. ಜನ ಕಳ್ಳನಿಗೆ ರಕ್ಷಣೆ ನೀಡಿದ್ದನ್ನು ಆಡಿಕೊಳ್ಳುವ ಮೊದಲೇ ಕಳ್ಳನ ಮನಪರಿವರ್ತನೆ ಮಾಡುವ ಮೂಲಕ ಶರಣನನ್ನಾಗಿಸಿದ್ದರು. ಗುರುವಿಗೆ ತನು, ಲಿಂಗಕ್ಕೆ ಮನ, ಭಕ್ತ ಜಂಗಮಗೆ ಧನ ಅರ್ಪಿಸಿ ನಿಜ ಶರಣನಾಗಿ ಬದುಕಿದರು. ದಿವ್ಯಶಕ್ತಿ ಪಡೆದು ಅನೇಕ ಪವಾಡಗಳನ್ನು ಪವಾಡಿಸಿ ದೈವತ್ವಕ್ಕೇರಿದರು.

ಶಹಾಪುರದಲ್ಲಿ ಪುರಾಣ ಮಂಟಪಕ್ಕೆ ಬೆಂಕಿ ಬಿದ್ದು ಭಕ್ತರೆಲ್ಲಾ ಆತಂಕಕ್ಕೆ ಒಳಗಾದಗ ಚರಬಸವೇಶ್ವರರು ಮಾತ್ರ ಸಮಾಧಾನ ಚಿತ್ತದಿಂದಲೇ ಇರುತ್ತಾರೆ. ತಮ್ಮ ದಿವ್ಯ ಶಕ್ತಿಯಿಂದ ಕ್ಷಣಾರ್ಧದಲ್ಲಿ ಬೆಂಕಿ ನಂದಿಸಿ ಅಪಾಯಕ್ಕೆ ಸಿಲುಕಿದ್ದ ಭಕ್ತರನ್ನು ಕಾಪಾಡುತ್ತಾರೆ. ಕೌಲಗಿ ಗ್ರಾಮದಲ್ಲಿ ಪ್ರವಚನ ಮುಗಿದ ಬಳಿಕ ಭಕ್ತರು ಪ್ರಸಾದಕ್ಕೆ ತೆರಳಿದಾಗ ಊಟದ ತಟ್ಟೆಗಳು ಖಾಲಿಯಾಗಿರುತ್ತವೆ. ಆದರೆ, ಭಕ್ತರ ಸಂಖ್ಯೆ ಮಾತ್ರ ಗಣನೀಯವಾಗಿರುತ್ತದೆ. ಆಯೋಜಕರು ಕಂಗಾಲಾಗಿ ನಿಂತಾಗ ಚರಬಸವೇಶ್ವರರು ಮೂಲೆಯಲ್ಲೇ ಇವೆ ನೋಡಿ ಎಂದು ರಾಶಿಗಟ್ಟಲೇ ಊಟದ ತಟ್ಟೆಗಳನ್ನು ಸೃಷ್ಟಿಸುವ ಮೂಲಕ ಪವಾಡ ಮೆರೆಯುತ್ತಾರೆ. ಜಲವನ್ನೇ ತುಪ್ಪವನ್ನಾಗಿಸಿ ದೀಪ ಉರಿಸುವ ಮೂಲಕ ಭಕ್ತರಲ್ಲಿ ಅಚ್ಚರಿ ಮೂಡಿಸುತ್ತಾರೆ. ಹೀಗೆ ತಮ್ಮ ದಿವ್ಯ ಶಕ್ತಿಯಿಂದ ಅನೇಕ ಪವಾಡಗಳನ್ನು ಮಾಡಿ ಭಕ್ತರ ಆರಾಧ್ಯದೈವ ಆದವರು ಚರಬಸವೇಶ್ವರರು ಎಂದು ಪುರಾಣ, ಪ್ರವಚನ, ಜನಪದ ಗೀತೆಗಳಿಂದ ತಿಳಿದು ಬರುತ್ತದೆ.

ಬೂತ , ಪ್ರೇತ, ಪಿಶಾಚಿ ಎಂದು ಬಂದವರಿಗೆ ವಿಭೂತಿ ಹಚ್ಚಿ ಆತ್ಮಸ್ಥೈರ್ಯ ತುಂಬುವ ಮೂಲಕ ಮೌಢ್ಯ ದೂರಾಗಿಸಿ ಗ್ನಾನಾಮೃತ ತುಂಬಿದರು. ಕಾಯಕ ಮತ್ತು ದಾಸೋಹ ತತ್ವದ ಮೂಲಕ ನಾಡಿನ ಜನರಲ್ಲಿ ಗ್ನಾನದ ದೀವಿಗೆ ಹೊತ್ತಿಸಿದರು. ಸಮಸಮಾಜದ ಪರಿಕಲ್ಪನೆ ಮೂಲಕ ಮೇಲು-ಕೀಳೆಂಬುದನ್ನು ತೊಳೆದರು. ಇಂದಿಗೂ ಸಹ ಚರಬಸವೇಶ್ವರ ದೇಗುಲದಲ್ಲಿ ನಿತ್ಯ ದಾಸೋಹವಿದೆ. ಕಷ್ಟವೆಂದು ಬಂದ ಭಕ್ತರು ಚರಬಸವನ ನೆನೆದು ವಿಭೂತಿ ಹಚ್ಚಿಕೊಂಡರೆ ಸಾಕು ಸಮಾಧಾನ ಮೂಡುತ್ತದೆ ಎಂಬುದು ಭಕ್ತರ ನಂಬಿಕೆ.

ಚರಬಸವೇಶ್ವರರ ಹೆಸರಿನಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬವಾದ ಐದನೇ ದಿನಕ್ಕೆ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆ ನಡೆಯುತ್ತದೆ. ಗದ್ದುಗೆಯ ಗುರುಗಳಾದ ಬಸ್ಸಯ್ಯ ತಾತನವರ ಸಾನಿಧ್ಯದಲ್ಲಿ ಚರಬಸವೇಶ್ವರ ಗುದ್ದುಗೆಯಿಂದ ನಾಗರಕೆರೆ ಅಂಗಳದವರೆಗೆ ಅದ್ಧೂರಿ ರಥೋತ್ಸವ ಜರುಗುತ್ತದೆ. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಕೆಲವರು ಬಾಳೇಹಣ್ಣು, ಉತ್ತುತ್ತಿ, ಹೂವು ಎಸೆದರೆ ಇನ್ನೂಕೆಲವರು ಅದನ್ನೇ ಪ್ರಸಾದವಾಗಿ ಸ್ವೀಕರಿಸುತ್ತಾರೆ.

ರಥೋತ್ಸವದ ಬಳಿಕ ಸುಮಾರು 15ದಿನಗಳವರೆಗೆ ಗದ್ದುಗೆ ಅಂಗಳದಲ್ಲಿ ಜಾತ್ರೆ ನಡೆಯುತ್ತದೆ. ದನಗಳ ಜಾತ್ರೆ ರೈತ ಸಂಸ್ಕೃತಿ ಅನಾವರಣಗೊಳಿಸುತ್ತದೆ. ರಾಜ್ಯದ ಅನೇಕ ಭಾಗಗಳಿಂದ ನೂರಾರು ರೈತರು ಜಾನುವಾರುಗಳೊಡನೆ ಬಂದು ಕೊಡು-ಕೊಳ್ಳುವಿಕೆಯಲ್ಲಿ ತೊಡಗುತ್ತಾರೆ. ಸಿಂಗರಿಸಿದ ಎತ್ತಿನಗಾಡಿ, ಜಾನುವಾರು, ರೈತರ ಜಾನುವಾರು ಪ್ರೀತಿ ಕಾಣೋದೆ ಚಂದ. ಮತ್ತೊಂದು ಕಡೆ ಸಿಹಿ ತಿನಿಸುಗಳು ಅಂಗಡಿಗಳ ಸಾಲು, ಮಕ್ಕಳ ಆಟಿಕೆಗಳ ಭಾರಾಟೆ ಜೋರಾಗಿರುತ್ತದೆ. ಅಲ್ಲದೆ ಮನೋರಂಜನೆಗಾಗಿ ವಿವಿಧ ಬಗೆಯ ಎಕ್ಸಿಬ್ಯೂಷನ್ ಸಹ ಇರುತ್ತದೆ. ವರ್ಷಕ್ಕೊಮ್ಮೆ ನಡೆಯುವ ಶಹಾಪುರದ ಚರಬಸವೇಶ್ವರ ಜಾತ್ರೆ ವೈಶಿಷ್ಟ್ಯ ಪೂರ್ಣವಾಗಿದ್ದು ಕಾಯಕ, ದಾಸೋಹ ತತ್ವ ಸಾರುವುದರ ಜೊತೆಗೆ ಭಕ್ತರು ಮತ್ತು ರೈತರ ಜಾತ್ರೆಯೂ ಆಗಿದೆ. ಮಕ್ಕಳು-ಮಹಿಳೆಯರು ಸೇರಿ ಸರ್ವರ ಜಾತ್ರೆಯೂ ಆಗಿದೆ.

Related Articles

Leave a Reply

Your email address will not be published. Required fields are marked *

Back to top button