ಅವರು ಮೀನುಂಡು ಬಂದರು, ಇವರು ಉಪವಾಸ ಬಂದರು!
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಧರ್ಮಸ್ಥಳ ಭೇಟಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥಸ್ವಾಮಿಯ ದರ್ಶನ ಪಡೆದರು. ಬೆಳಗ್ಗೆ 7ಗಂಟೆಗೆ ದೆಹಲಿಯಿಂದ ಧರ್ಮಸ್ಥಳಕ್ಕೆ ಹೊರಟ ನರೇಂದ್ರ ಮೋದಿ ಅವರು 11ಗಂಟೆಗೆ ಮಂಜುನಾಥನ ದರ್ಶನ ಪಡೆಯುವವರೆಗೆ ಉಪವಾಸವಿದ್ದರು. ಧರ್ಮಸ್ಥಳದ ವಸ್ತ್ರ ಸಂಹಿತೆಯನ್ನು ಪಾಲಿಸಿದ ಮೋದಿ ಜುಬ್ಬಾ ಕಳಚಿ ಕೇಸರಿ ಶಾಲು ಹೊದ್ದು ಮಂಜುನಾಥದ ದರ್ಶನ ಪಡೆದರು. ರುದ್ರಾಭಿಷೇಕ ಸಂಕಲ್ಪದ ಮೂಲಕ ದೇಶದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ದೇವರ ದರ್ಶನ ಪಡೆದ ನಂತರವೇ ಫಲಾಹರ ಸೇವಿಸಿದರು. ಆ ಮೂಲಕ ಪರಮದೈವ ಭಕ್ತರಾದ ನರೇಂದ್ರ ಮೋದಿ ಧರ್ಮ ಸಂದೇಶ ರವಾನಿಸಿದ್ದಾರೆ.
ಇತ್ತೀಚೆಗಷ್ಟೇ ಮಖ್ಯಮಂತ್ರಿ ಸಿದ್ಧರಾಮಯ್ಯ ಮೀನು ಊಟ ಮಾಡಿ ಧರ್ಮಸ್ಥಳದ ದೇಗುಲಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ದೇವರು ಮಾಂಸ ತಿಂದು ಬರಬೇಡ ಎಂದು ಹೇಳಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದರು. ಅಲ್ಲದೆ ಬೇಡರ ಕಣ್ಣಪ್ಪ ಯಾರು ಎಂದು ಮರು ಪ್ರಶ್ನೆ ಹಾಕಿ ಹೊಸ ಚರ್ಚೆಗೆ ಕಾರಣರಾಗಿದ್ದರು. ಆ ಮೂಲಕ ಸಿಎಂ ಪ್ರಗತಿಪರ ನಿಲುವನ್ನು ಪ್ರಕಟಿಸಿದ್ದರು. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಧರ್ಮಸ್ಥಳ ಭೇಟಿ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ. ಮೋಧಿ ಭಕ್ತರು ಪ್ರಧಾನಿ ನಡೆಯನ್ನು ಹಾಡಿ ಹೊಗಳುತ್ತಿದ್ರೆ ಸಿದ್ಧರಾಮಯ್ಯ ಅಭಿಮಾನಿಗಳು ಸಿಎಂ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹೀಗೆ ರಾಜಕೀಯ ನಾಯಕರು ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದದ್ದೂ ಸಹ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಸಿಕ್ಕಿರುವುದು ನಿಜಕ್ಕೂ ವಿಪರ್ಯಾಸವೇ ಸರಿ ಅಲ್ಲವೇ?