ಕಂದಮ್ಮಗಳ ರಕ್ಷಣೆ ಹೀಗಿರಲಿ..! ಈ STORY ತಾಯಿಗೆ ಮಾತ್ರವಲ್ಲ ತಂದೆಗೂ ಉಪಯುಕ್ತ.!
ಮಕ್ಕಳ ರಕ್ಷಣೆಗೆ ಕೇವಲ ಮುದ್ದು ಸಾಲದು..ರಕ್ಷಣೆಯ ತಂತ್ರಗಳು ಅಗತ್ಯ
ಜಯಶ್ರೀ. ಅಬ್ಬಿಗೇರಿ
ಮಗುವಿನ ನಗು ಕಣ್ಣಿಗೆ ಬಿದ್ದರೆ ಸಾಕು ಎಂಥ ಒತ್ತಡವೂ ಕ್ಷಣಾರ್ಧದಲ್ಲಿ ಮಂಗ ಮಾಯವಾಗುವುದು. ರೋಸಿ ಹೋದ ಮನಸ್ಸು ಉಲ್ಲಸಿತಗೊಳ್ಳುವುದು. ಅಂಥ ನವೋಲ್ಲಾಸ ನೀಡುವ ತಾಕತ್ತು ಮುದ್ದು ಕಂದಮ್ಮಗಳ ಮುದ್ದು ಮುಖದಲ್ಲಡಗಿದೆ. ಮೊದಲೆಲ್ಲ ಮಕ್ಕಳು ಅವಿಭಕ್ತ ಕುಟುಂಬದಲ್ಲಿ ಕೂಡಿ ಬೆಳೆಯುತ್ತಿದ್ದರು. ಹೀಗಾಗಿ ಮಕ್ಕಳನ್ನು ಬೆಳೆಸುವುದು ಒಂದು ದೊಡ್ಡ ಜವಾಬ್ದಾರಿ ಕೆಲಸ ಎನ್ನಿಸುತ್ತಲೇ ಇರಲಿಲ್ಲ. ಇಂದಿನ ದಿನಮಾನದಲ್ಲಿ ಅವಿಭಕ್ತ ಕುಟುಂಬಗಳು ಅಲ್ಲೊಂದು ಇಲ್ಲೊಂದು ಮಾತ್ರ ಕಾಣ ಸಿಗುತ್ತವೆ. ವಿಭಕ್ತ ಕುಟುಂಬಗಳಲ್ಲಿ ಮಕ್ಕಳನ್ನು ಬೆಳೆಸುವುದು ಸಾಕು ಸಾಕೆನಿಸುತ್ತಿದೆ.
ಉದ್ಯೋಗಸ್ಥ ಮಹಿಳೆಯರು ಪಡುವ ಕಷ್ಟವಂತೂ ಅಷ್ಟಿಷ್ಟಲ್ಲ. ಮನೆ ಕಛೇರಿ ಕೆಲಸಗಳ ಮಧ್ಯದಲ್ಲಿ ಮಕ್ಕಳ ಪೋಷಣೆ ಅವಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮನೆಯಲ್ಲಿರುವ ತಾಯಂದಿರಿಗೂ ಮಕ್ಕಳ ಪೋಷಣೆ ಸುಲಭವಾಗಿಲ್ಲ. ತಾಯಿ ಪ್ರೀತಿ ಮಗುವಿಗೆ ಅಮೂಲ್ಯ. ಹಾಗಂತ ಮಕ್ಕಳ ಪೋಷಣೆಯಿಂದ ತಂದೆ ದೂರವಿದ್ದರೆ ನಡೆಯುತ್ತದೆ ಎಂದು ನಿರ್ಲಕ್ಷ್ಯ ತೋರಿದರೆ ಮುಂದೊಂದು ದಿನ, ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಫ್ರಾಂಕ್ ಪಿಟ್ ಮನ್ ಉಲ್ಲೇಖಿಸಿದಂತೆ, ‘ತಂದೆ ಆಗುತ್ತಿರುವೆನೆಂದು ಭಯ ಪಡುವವರಿಗೆ ಅರ್ಥವಾಗದೇ ಇರುವುದೇನೆಂದರೆ, ಮಕ್ಕಳನ್ನು ಹೆರುವವರೆಲ್ಲ ಪರಿಪೂರ್ಣ ವ್ಯಕ್ತಿಗಳಲ್ಲ, ಆದರೆ ತಂದೆಯಾಗುವುದರಿಂದಲೇ ಅವರು ಪರಿಪೂರ್ಣ ವ್ಯಕ್ತಿಗಳಾಗುವರೆಂದು. ಮಕ್ಕಳನ್ನು ಬೆಳೆಸುವಲ್ಲಿ ತಯಾರಾಗುವ ಕೊನೆಯ ಉತ್ಪನ್ನ ಮಗು ಅಲ್ಲ, ಪೋಷಕರೇ!’ ಮಾಂಸ ರಕ್ತದ ಮುದ್ದೆಯಂತಿರುವ ಮಗುವಿನ ರಕ್ಷಣೆಗೆ ಕೇವಲ ಮುದ್ದು ಸಾಲದು. ಅದರೊಂದಿಗೆ ಪೋಷಣೆಗೆ ಬೇಕಿರುವ ರಕ್ಷಣೆಯ ತಂತ್ರಗಳ ಅಳವಡಿಕೆಯೂ ಮುಖ್ಯವಾಗಿದೆ.
ಅಪಾಯಕಾರಿ ವಸ್ತುಗಳು ಕೈಗೆಟುಕದಂತಿರಲಿ
ಹೆಚ್ಚು ಬೆಳಕಿಲ್ಲದ ಕೋಣೆಯಲ್ಲಿ ಮಂದವಾಗಿ ಉರಿಯುವ ಪುಟ್ಟ ಹಣತೆಯಂತೆ ನಗು ಚೆಲ್ಲುತ್ತಿರುವ ಮಗು ಅಂಬೆಗಾಲಿಡ ತೊಡಗಿದರೆ ಮನೆ ಮಂದಿಗೆಲ್ಲ ಸಂಭ್ರಮವೇ ಸಂಭ್ರಮ. ನಡೆಯಲಾರಂಭಿಸಿದರಂತೂ ಸಂತಸ ಮನೆ ಮಾಡುತ್ತದೆ. ಜೊತೆಗೆ ಆತಂಕವೂ ನಿರ್ಮಾಣವಗುತ್ತದೆ.ನಡೆದಾಡುವಾಗ ಸಿಗುವ ಎಲ್ಲ ಸಾಮಾನುಗಳನ್ನು ಮಗು ಕುತೂಹಲದ ಕಂಗಳಿಂದ ನೋಡುತ್ತ ಬಾಯಿಗೆ ಹಾಕಿಕೊಳ್ಳುತ್ತದೆ. ಇದು ನಿಜಕ್ಕೂ ಅಪಾಯಕಾರಿ. ಇಂಥ ಕಂದಮ್ಮಗಳ ರಕ್ಷಣೆಗೆ ಹದ್ದಿನ ಕಣ್ಗಾವಲು ಬೇಕೇ ಬೇಕು. ಅಪಾಯಕಾರಿ ವಸ್ತುಗಳನ್ನು ಮಗುವಿನ ಕೈಗೆ ಸಿಗದಂತೆ ಎತ್ತರದಲ್ಲಿಡಿ. ಕತ್ತರಿ ಚಾಕುವಿನಂಥ ಚೂಪಾದ ವಸ್ತುಗಳನ್ನು ಎತ್ತಿಡಿ., ಇಸ್ತ್ರೀಗೆ ಮಿಕ್ಸರ್ ಗ್ರೈಂಡರ್ ಸಲುವಾಗಿ ಪ್ಲಗ್ ಪಾಯಿಂಟ್ ಕೆಳಗೆ ಹಾಕಿಸಿದ್ದರೆ ಅವುಗಳನ್ನು ಬ್ಲಾಕ್ ಮಾಡಿ ಬಿಡಿ. ಮೊಬೈಲ್ ಚಾರ್ಜರ್‍ನ ವಯರ್ ಇನ್ನಿತರೆ ವಯರ್‍ಗಳನ್ನು ಕೈಗೆ ಸಿಗದಷ್ಟು ಎತ್ತರದಲ್ಲಿಡಿ.
ರಾಸಾಯನಿಕಯುಕ್ತ ಪದಾರ್ಥಗಳನ್ನು ದೂರವಿಡಿ
ಸಣ್ಣ ಮಕ್ಕಳು ಮನೆ ತುಂಬ ಎಲ್ಲೆಂದರಲ್ಲಿ ಓಡಾಡುತ್ತವೆ. ಹೆಚ್ಚಾಗಿ ಅವು ಓಡಾಡುವ ಸ್ಥಳದಲ್ಲಿ ರಾಸಾಯನಿಕಯುಕ್ತ ಪದಾರ್ಥಗಳಾದ ಸಾಬೂನು ಸಾಬೂನಿನ ಪುಡಿ ಅಲಂಕಾರಿಕ ವಸ್ತುಗಳನ್ನಿಡಬೇಡಿ. ಸೌಂದರ್ಯವರ್ಧಕಗಳಲ್ಲಿ ಕೆಲವು ವಿಷಾಂಶಗಳು ಇರುತ್ತವೆ. ಆದ್ದರಿಂದ ಅವು ಮಗುವಿನ ಕೈಗೆ ಸಿಗದಂತಿರಲಿ.
ಮಹಡಿ ಮನೆಗಳಲ್ಲಿ
ಮೆಟ್ಟಿಲುಗಳ ಮೇಲೆ ಹತ್ತಲು ಇಳಿಯಲು ಮಗು ಪ್ರಯತ್ನಿಸುತ್ತಿರುತ್ತದೆ. ಕೆಲವೊಮ್ಮೆ ಪೋಷಕರು ನೋಡು ನೋಡುತ್ತಿದ್ದಂತೆಯೇ ಮೆಟ್ಟಿಲುಗಳನ್ನು ಹತ್ತಿಳಿಯುವುದರಲ್ಲಿ ಅವಘಡಗಳು ನಡೆದು ಹೋಗುತ್ತವೆ. ಆದ್ದರಿಂದ ಮೆಟ್ಟಿಲುಗಳನ್ನು ಹತ್ತದಂತೆ ಮೆಟ್ಟಿಲಿನ ದಾರಿಗೆ ಏನಾದರೂ ಅಡ್ಡಲಾಗಿ ತಡೆಯೊಡ್ಡಬೇಕು. ಬಾಲ್ಕನಿಯ ಕಂಬಿಗಳ ಸಂದಿಯಲ್ಲಿ ತಲೆ ತೂರಿಸುವ ಸಾಧ್ಯತೆಗಳು ಇಲ್ಲವೆಂದಿಲ್ಲ. ಕಂಬಿಗಳ ಸಂದಿಯ ಅಂತರ ಹೆಚ್ಚಾಗಿದ್ದಲ್ಲಿ ತಾತ್ಕಾಲಿಕವಾಗಿ ಕಟ್ಟಿಗೆಯ ತುಂಡುಗಳಿಂದ ಕಂಬಿಗಳನ್ನು ಮುಚ್ಚಿಬಿಡುವುದು ಒಳಿತು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಮನೆಯ ಬಾಗಿಲಿಗೆ ಅಡ್ಡಲಾಗಿ ಕಟ್ಟಿಗೆಯ ತಡೆಯನ್ನು ಬಳಿಸುವುದು ಒಳ್ಳೆಯದು.
ನೀರಿನ ಟ್ಯಾಂಕ್ ಮುಚ್ಚಿಡಿ
ಬೆಳೆಯುವ ಕಂದಮ್ಮನಿಗೆ ಎಲ್ಲವೂ ಆಕರ್ಷಣೀಯವೇ! ಅದರಲ್ಲೂ ನೀರು ಮಕ್ಕಳನ್ನು ಇನ್ನಿಲ್ಲದಂತೆ ಆಕರ್ಷಿಸುತ್ತದೆ. ಮಕ್ಕಳು ನೀರಿನಲ್ಲಿ ಆಡುವುದನ್ನು ಇಷ್ಟ ಪಡುತ್ತವೆ. ನೀರಿನ ಟಬ್‍ನ ಹತ್ತಿರ ಸ್ಟೂಲ್ ಕುರ್ಚಿಗಳನ್ನು ಇಡಬೇಡಿ. ನೀರಿನ ಸಂಗ್ರಹಣೆಗಾಗಿ ಬಳಸುವ ಡ್ರಮ್‍ಗಳ ಮುಚ್ಚಳವನ್ನು ಮುಚ್ಚಿಡಬೇಕು. ಡ್ರಮ್‍ಗಳ ಮೇಲೆ ಏರಲಾಗದಂತೆ ನೋಡಿಕೊಳ್ಳಬೇಕು. ಮನೆಯ ಮುಂದಿರುವ ನೀರಿನ ಟ್ಯಾಂಕ್‍ಗಳ ಮುಚ್ಚಳವನ್ನು ಅವಸರದಲ್ಲಿ ಹಾಗೇ ತೆರೆದಿಟ್ಟರೆ ಅಪಾಯಕ್ಕೆ ಆಹ್ವಾನ ನೀಡಿದಂತೆಯೇ ಸರಿ. ಕಣ್ಣ ರೆಪ್ಪೆಯಂತೆ ಜೋಪಾನ ಮಾಡಿದ ಮಗುವನ್ನು ನೀರಿಗೆ ಧಾರೆಯೆರೆಯುವ ನೋವಿನ ಉತ್ತುಂಗದ ಸ್ಥಿತಿ ನಿರ್ಮಾಣವಾಗಬಹುದು ಎಚ್ಚರ!
ಅಂಗಳದಲ್ಲಿ ಇತರ ಮಕ್ಕಳೊಂದಿಗೆ ಆಟವಾಡಲು ಅಂಗಳದಲ್ಲಿಳಿದಾಗ ಕೈಗೆ ಸಿಗುವ ಮಣ್ಣು, ಕಸ, ಕಾಗದ ಇನ್ನಿತರೆ ಪದಾರ್ಥಗಳನ್ನು ಸೀದಾ ಬಾಯಿಗೆ ಹಾಕಿಕೊಳ್ಳುತ್ತದೆ.ಹೀಗಾಗಿ ಪೋಷಕರೂ ಮಗುವಿನೊಂದಿಗಿರುವುದು ಉತ್ತಮ. ತೆರೆದ ಮ್ಯಾನ್ ಹೋಲ್‍ಗಳು,ಬಾಯಿ ತೆರೆದ ಕೊಳವೆ ಬಾವಿಗಳ ಅನಾಹುತಗಳನ್ನು ಕಂಡಿದ್ದೇವೆ ಕೇಳಿದ್ದೇವೆ. ಹೀಗಾಗಿ ಜಾಗೃತಿ ವಹಿಸುವುದು ಅತಿ ಮುಖ್ಯವೆನಿಸುತ್ತದೆ.
ನಾಣ್ಯಗಳನ್ನು ಕೈಗಿಡಬೇಡಿ..!
ಕೆಲ ಪೋಷಕರು ಮಗು ಅತಿಯಾಗಿ ಹಟ ಮಾಡುತ್ತಿದ್ದರೆ ಕೈಯಲ್ಲಿ ನಾಣ್ಯ ಕೊಟ್ಟು ಸುಮ್ಮನಾಗಿಸಲು ನೋಡುತ್ತಾರೆ. ಕೆಲವೊಮ್ಮೆ ನೆಂಟರು ಬಂದಾಗ ಪ್ರೀತಿಯಿಂದ ಕೊಟ್ಟ ನಾಣ್ಯ ಅಚಾತುರ್ಯದಿಂದ ಮಗುವಿನ ಕೈಯಲ್ಲಿ ಉಳಿದರೆ, ಗೊತ್ತಿಲ್ಲದೆ ಮಗು ಬಾಯಿಗೆ ಹಾಕಿಕೊಂಡು ಗಂಟಲದಲ್ಲಿ ಸಿಕ್ಕಿ ಹಾಕಿಕೊಳ್ಳುವ ಅಪಾಯಕಾರಿ ಸನ್ನಿವೇಶಗಳನ್ನು ತಂದೊಡ್ಡುತ್ತವೆ.
ಬಸ್ ನಲ್ಲಿ ಮಗು ನಿದ್ದೆಗೆ ಜಾರಿದಾಗ ಆರಾಮವಾಗಿ ಮಲಗಿಕೊಳ್ಳಲಿ ಎಂದು ಮಗುವನ್ನಷ್ಟೇ ಒಂದು ಸೀಟಿನಲ್ಲಿ ಮಲಗಿಸಿದರೆ ಅಚಾನಾಕ್ಕಾಗಿ ಹಾಕುವ ಬ್ರೆಕ್‍ಗಳಲ್ಲಿ ಮಗು ಬಿದ್ದು ಗಾಯ ಮಾಡಿಕೊಳ್ಳುವ ಪ್ರಸಂಗ ಉಂಟಾಗುತ್ತದೆ. ಕಾರ್ ವಾಹನಗಳಲ್ಲಿ ಪ್ರವಾಸ ಮಾಡುವಾಗ ಮಗು ನಿಮ್ಮೊಂದಿಗೆ ಸೀಟ್ ಬೆಲ್ಟ್ ಕಟ್ಟಿಕೊಂಡಿರಲಿ. ಕಿಟಕಿಯಲ್ಲಿ ಕೈ ತಲೆ ಹಾಕದಂತೆ ಜಾಗರೂಕತೆ ವಹಿಸಲೇಬೇಕು.
ಹೀಗೇ ಮುದ್ದು ಕಂದಮ್ಮಗಳ ಪೋಷಣೆ ಎಂಬುದು 24/7 (ವಾರದ ಏಳೂ ದಿನ, ದಿನದ ಇಪ್ಪತ್ನಾಲ್ಕು ಗಂಟೆಗಳ) ಜವಾಬ್ದಾರಿ ಇದ್ದಂತೆಯೇ ಸರಿ. ಏನೂ ಅರಿಯದ ಮುಗ್ಧ ಮಕ್ಕಳನ್ನು ರಕ್ಷಿಸಿ ಬೆಳೆಸುವುದು ಪುಟ್ಟ ಸಸಿಯನ್ನು ನೆಟ್ಟು ರಕ್ಷಿಸಿ ಬೆಳೆಸುವುದಕ್ಕಿಂತಲೂ ಕಠಿಣತಮವಾದುದು. ಮನೆಯೊಂದರಲ್ಲಿ ಮಗು ಹುಟ್ಟಿದಾಗ ರೆಕ್ಕೆ ಕಟ್ಟಿಕೊಂಡ ಹಕ್ಕಿಯಂತೆ ಹಾರಾಡಿದ ಮನಸ್ಸುಗಳ ಸಂಭ್ರಮ ಮಕ್ಕಳು ಬೆಳೆದು ನಿಂತಾಗಲೂ ಇರಬೇಕೆಂದರೆ ಮಕ್ಕಳ ಪೋಷಣೆಯಲ್ಲಿ ಇರಲಿ ಸದಾ ಎಚ್ಚರ!
ತಾವು ತಿಳಿಸಿದಂತೆ ಪಾಲಕರು ತೆಗೆದು ಬೇಕಾದ ಎಚ್ತರಿಕೆಗಳ ಬಗ್ಗೆ ಸರಿಯಾಗಿ.ಬರೆದಿದ್ದೀರಿ ಮೆಡಂ.
ನಾವು ಎಷ್ಟೇ ಎಚ್ಚರಿಕೆವಹಿಸಿದರೂ ಅಪಾಯ ಯಾವ ರೀತಿ ಎರಗುತ್ತೆ ಅಂತಾ ಗ್ರಹಿಸೋಕ್ಕಾಗಲ್ಲ.