ಅಂಬಿಗರ ಚೌಡಯ್ಯ ನಿಗಮ ಅದ್ಯಕ್ಷ ಗಾದಿಗಾಗಿ ನಾಯಕರ ಸಮರ?
ಮಾಜಿ ಸಚಿವ ಚಿಂಚನಸೂರ, ಕೋಲಿ ಸಮಾಜ ಮುಖಂಡ ಕಮಕನೂರ ಮದ್ಯೆ ವಾಗ್ವಾದ
ಕಲಬುರಗಿ: ಅಂಬಿಗರ ಚೌಡಯ್ಯ ನಿಗಮದ ಅದ್ಯಕ್ಷ ಸ್ಥಾನಕ್ಕಾಗಿ ಕೋಲಿ ಸಮಾಜದ ಮುಖಂಡರ ಮದ್ಯೆ ತೀವ್ರ ಪೈಪೋಟಿ ಶುರುವಾಗಿದೆ. ನಿನ್ನೆ ಸಂಜೆ ವೇಳೆ ನಗರದಲ್ಲಿನ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಕೋಲಿ ಸಮಾಜದ ಹಿರಿಯ ಮುಖಂಡ ತಿಪ್ಪಣ್ಣ ಕಮಕನೂರ್ ಮದ್ಯೆ ಇದೇ ವಿಚಾರದಲ್ಲಿ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ.
ತಿಪ್ಪಣ್ಣಪ್ಪ ಕಮಕುನೂರ ಅವರೂ ಸಹ ಅಂಬಿಗರ ಚೌಡಯ್ಯ ನಿಗಮದ ಅದ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಆದರೆ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರು ತಮ್ಮ ಬೆಂಬಲಿಗರೊಬ್ಬರನ್ನು ಅದ್ಯಕ್ಷ ಸ್ಥಾನದಲ್ಲಿ ಕೂಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ನಿನ್ನೆ ಸಂಜೆ ವೇಳೆ ಇಬ್ಬರೂ ಮುಖಂಡರು ಖರ್ಗೆ ಅವರ ಮನೆಯಲ್ಲಿ ಮುಖಾಮುಖಿ ಆಗಿದ್ದು ವಾಗ್ವಾದ ನಡೆದಿದೆ. ತಿಪ್ಪಣ್ಣಪ್ಪ ಕಮಕನೂರ ಅದ್ಯಕ್ಷ ಆಗೋದು ಬೇಡ ಎಂದು ಹೇಳಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ದಬಾಯಿಸಲು ಮುಂದಾಗಿದ್ದರಂತೆ. ಈ ವೇಳೆ ತಿರುಗಿಬಿದ್ದ ತಿಪ್ಪಣ್ಣಪ್ಪ ನಿನ್ನನ್ನು ಬೆಳೆಸಿದ್ದೇ ನಾನು. ತಾಕತ್ತಿದ್ದರೆ ಚಿತ್ತಾಪುರಕ್ಕೆ ಬಾ ನೊಡೋಣ ಎಂದು ಆವಾಜ್ ಹಾಕಿದ್ದಾರಂತೆ.
ಆದರೆ, ಈ ಘಟನೆ ನಡೆದಾಗ ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಇಬ್ಬರು ನಾಯಕರ ಮದ್ಯದ ವೈಮನಸ್ಸು ಶಮನಗೊಳಿಸಲು ಕೋಲಿ ಸಮಾಜದ ಮುಖಂಡರು ಯಾವ ರೀತಿ ರಾಜಿ ಸಂಧಾನ ನಡೆಸಲಿದ್ದಾರೆ. ಕೊನೆಗೆ ಯಾರು ಅಂಬಿಗರ ಚೌಡಯ್ಯ ನಿಗಮದ ಅದ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.