ಅಪರಾಧ ಕೃತ್ಯ ತಡೆಯುವಲ್ಲಿ ಸರ್ಕಾರ ವಿಫಲ-ಪೋಲಂಪಲ್ಲಿ ಆರೋಪ
ಆರೋಪಿಗಳಿಗೆ ಕಠಿಣ ಶಿಕ್ಷೆಃ ಸಿಐಟಿಯು ಆಗ್ರಹ
yadgiri, ಶಹಾಪುರಃ ಮಂಡ್ಯ ಜಿಲ್ಲೆಯ ಮದ್ದೂರ ತಾಲೂಕಿನ ಉರಗಲವಾಡಿ ಗ್ರಾಮದಲ್ಲಿ ಕೂಲಿ ಕಾರ್ಮಿಕ ದಂಪತಿಗಳ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಇಲ್ಲಿನ ಸಿಐಟಿಯು ಸಂಘಟನೆಯ ಕಾರ್ಯಕರ್ತರು ತಹಸೀಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಗೃಹ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಉರಗಲವಾಡಿ ಗಾಮದ ಬಾಲಿಕಯೋರ್ವಳ ಮೇಲೆ ಅತ್ಯಾಚಾರ ನಡೆಸಿ ಕತ್ತು ಸೀಳಿ ಕೊಲೆ ಮಾಡಿರುವದು ಅತ್ಯಂತ ಹೇಯ ಕೃತ್ಯ. ಈ ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡಬಾರದು. ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದುಷ್ಕøತ್ಯ ಇಡಿ ಬೆಚ್ಚಿ ಬೀಳಿಸಿದ್ದು ಅಲ್ಲದೆ ಮಾನವ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ದೇಶದಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮಹಿಳೆಯರ ಮೇಲೆ ನಿರಂತರ ಅನ್ಯಾಯ, ಅತ್ಯಾಚಾರ, ಶೋಷಣೆ, ಕೊಲೆಗಳು ನಡೆಯುತ್ತಲೇ ಇವೆ. ಸರ್ಕಾರ ಇಂತಹ ಹೀನ ಕೃತ್ಯ, ಅಪರಾಧ ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಆರೋಪಿಗಳು ರಾಜಾರೋಷವಾಗಿ ತಿರುಗುತ್ತಿರುವ ವಿಷಯ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ. ಇಂತಹ ಹೀನ ಕೃತ್ಯ ಎಸಗಿದವರಿಗೆ ಸರ್ಕಾರ ಜನಪ್ರತಿನಿಧಿಗಳು ಬೆಂಬಲ ನೀಡುವ ಮೂಲಕ ಪೋಷಿಸುತ್ತಿರುವದು ದುರಂತವೇ ಸರಿ ಎಂದರು.
ಬಾಲಕಿಯನ್ನು ಕಳೆದುಕೊಂಡ ಕುಟುಂಬಕ್ಕೆ ಈ ಕೂಡಲೇ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು.
ಉಪಜೀವನಕ್ಕಾಗಿ ಕೂಲಿ ಕೆಲಸವನ್ನು ಹುಡುಕಿಕೊಂಡು ಗುಳೆ ಹೋಗಿದ್ದ ಕುಟುಂಬ ತಮ್ಮ ಕರುಳಿನ ಕುಡಿ ಕಳೆದುಕೊಂಡು ಕಣ್ಣೀರನಲ್ಲಿ ಕೈತೊಳೆಯುವಂತಾಗಿದೆ. ಕುಟುಂಬದ ಜೀವನ ಭದ್ರತೆಗಾಗಿ ಸರ್ಕಾರ ಕುಟುಂಬಸ್ಥರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಮನವಿ ಮಾಡಿದರು. ಮೊದಲು ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸುವ ಮೂಲಕ ಸಮಾಜಕ್ಕೆ ಎಚ್ಚರಿಕೆ ನೀಡಬೇಕೆಂದು ಅವರ ಒತ್ತಾಯಿಸಿದರು.
ಜಿಲ್ಲಾ ಮುಖಂಡ ಜೈಲಾಲ್ ತೋಟದಮನಿ ಮಾತನಾಡಿದರು. ತಾಲ್ಲೂಕ ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ, ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ಈರಮ್ಮ ಹಯ್ಯಾಳಕರ, ಕಾರ್ಮಿಕ ಮುಖಂಡ ನಿಂಗಣ್ಣ ನಾಟೇಕಾರ ಸೇರಿದಂತೆ ಇತರರಿದ್ದರು.