ಪ್ರಮುಖ ಸುದ್ದಿ

ಶಹಾಪುರದಲ್ಲಿ ಕೊಲೆಮಾಡಿ ವಿಜಯಪುರಕ್ಕೆ ಶವ ಹೊತ್ತೊಯ್ದ ಭೂಪನನ್ನು ಹಿಡಿದು ತಂದರು ಪೊಲೀಸರು!

ಶಹಾಪುರದಲ್ಲಿ ಕೊಲೆಮಾಡಿ ವಿಜಯಪುರಕ್ಕೆ ಲಾರಿಯಲ್ಲಿ ಶವ ಹೊತ್ತೊಯ್ದ ಭೂಪನನ್ನು ಹಿಡಿದು ತಂದರು ಶಹಾಪುರ ಪೊಲೀಸರು!

ಸೆ.7 ರಂದು ಶಹಾಪುರ ಗಂಜ್ ಪ್ರದೇಶದಲ್ಲಿ ನಡೆದ ಘಟನೆ, ಹೀಗೊಂದು ಮರ್ಡರ್ ಕಹಾನಿ

ಶಹಾಪುರಃ ಡ್ರೈವರ್‍ನ ಕಿರುಕುಳ ತಾಳದ ಕ್ಲೀನರನೊಬ್ಬ ಕೋಪದಿಂದ ಲಾರಿಯಲ್ಲೆ  ಡ್ರೈವರನನ್ನು ಕೊಚ್ಚಿ ಕೊಂದ ಘಟನೆ ಶಹಾಪುರ ನಗರದ ಗಂಜ ಏರಿಯಾದಲ್ಲಿ ಸೆ.7ರಂದು ಹಾಡುಹಗಲಲ್ಲೇ  ನಡೆದಿದೆ. ಆದರೆ, ಕುಡಿದ ಅಮಲಿನಲ್ಲಿ ಚಾಲಕ ಮತ್ತು ಕ್ಲೀನರ್ ಹೊಡೆದಾಡಿಕೊಂಡಿದ್ದಾರಷ್ಟೇ ಅಂತಲೇ ಜನ ಭಾವಿಸಿದ್ದರು. ಆದರೆ, ಲಾರಿಯಲ್ಲಿ ಬಿದ್ದಿದ್ದ ಚಾಲಕ ಮಾತ್ರ ಬಹಳ ಹೊತ್ತಾದರೂ ಎದ್ದೇ ಇಲ್ಲ. ಅನುಮಾನಗೊಂಡ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದ್ರೆ, ಪೊಲೀಸರು ಅಲ್ಲಿಗೆ ಬರುವಷ್ಟರಲ್ಲಿ  ಲಾರಿ ಸಮೇತ ಕ್ಲೀನರ್ ಮರಳಿ ವಿಜಯಪುರದತ್ತ ತೆರಳಿದ್ದಾನೆ. ಶಹಾಪುರ ಪೊಲೀಸರು ಪ್ರಕರಣದ ಬೆನ್ನು ಹತ್ತಿದಾಗ ಮರ್ಡರ್ ಮಿಸ್ಟರಿ ಬಯಲಾಗಿದೆ.

ವಿಜಯಪುರದಿಂದ ಶಹಾಪುರ ನಗರದ ಕಿರಾಣಿ ಅಂಗಡಿಗಳಿಗೆ ಸಾಮಾಗ್ರಿಗಳನ್ನು ವಿತರಿಸಲು ಸೆ. 5ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಲಾರಿ ನಗರಕ್ಕೆ ಬಂದಿತ್ತು. ಸೆ. 6 ರಂದು ಬೆಳಗ್ಗೆ ನಗರದ ಹಲವಾರು ಅಂಗಡಿಗಳಿಗೆ ಕಿರಾಣಿ ಮಾಲು ವಿತರಣೆಯನ್ನೂ ಮಾಡಲಾಗಿದೆ. ನಂತರ ಸೆ. 6ರ ಸಂಜೆ ವಾಪಸ್ ವಿಜಯಪುರಕ್ಕೆ ತೆರಳಬೇಕಂದಾಗ, ಯಾವುದೇ ಬಾಡಿಗೆ ದೊರೆಯದ ಕಾರಣ ರಾತ್ರಿ ಇಲ್ಲಿಯೇ ತಂಗಿದ್ದಾರೆ ಎನ್ನಲಾಗಿದೆ. ಸೆ. 7ರಂದು ಬೇಳಗ್ಗೆ ಕ್ಲೀನರ್ ಬಟ್ಟೆ ಖರೀಧಿಗೆ ಡ್ರೈವರ್ ಹತ್ತಿರ ಹಣ ಕೇಳಿದ್ದಾನೆ. ಆದ್ರೆ,  ಡ್ರೈವರ್ ಹಣ ನೀಡಲು ನಿರಾಕರಿಸಿದಾಗ ಇಬ್ಬರ ನಡುವೆ ಕಾದಾಟ ನಡೆದಿದೆ ಎನ್ನಲಾಗಿದೆ.

ತದ ನಂತರ ಮದ್ಯಾಹ್ನ ಡ್ರೈವರ್ ಟೈರ್ ಚಕ್ ಮಾಡುತ್ತಿರುವಾಗ ಕ್ಲೀನರ್ ವಾಸೀಂಸಾಬ್  ಡ್ರೈವರ್‍ನ ತಲೆಗೆ ರಾಡ್ ನಿಂದ ತಲೆಗೆ ಜೋರಾಗಿ ಹೊಡೆದಿದ್ದಾನೆ. ಪರಿಣಾಮ ಡ್ರೈವರ್ ಪರಶುರಾಮ ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಭಯಗೊಂಡ ಕ್ಲೀನರ್ ಮೃತ ಪರಶುರಾಂನ ದೇಹವನ್ನು ಲಾರಿಯಲ್ಲಿ ಹಾಕಿಕೊಂಡು ವಿಜಯಪುರಕ್ಕೆ ತೆರಳಿದ್ದಾನೆ. ವಿಜಯಪುರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಲಾರಿ ಬಿಟ್ಟು ಪರಾರಿಯಾಗಿದ್ದ ಎನ್ನಲಾಗಿದೆ.

ವಿಜಯಪುರ ಮೂಲದ ಲಾರಿಯಾದ್ದರಿಂದ ಸದಾ ಇಲ್ಲಿನ ಕಿರಾಣಿ ಅಂಗಡಿಗಳಿಗೆ ಮಾಲು ವಿತರಿಸಲು ಬರುತ್ತಿದ್ದ ಮಾಹಿತಿ ಮೇರೆಗೆ ಜಾಡು ಹಿಡಿದ ಪೊಲೀಸರು ಲಾರಿ ನಂಬರ್ ಪಡೆದು ಬೆನ್ನುಹತ್ತಿದಾಗ ಲಾರಿ ವಿಜಯಪುರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತಂಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಲಾರಿಯಲ್ಲಿ ಡ್ರೈವರ್  ಪರಶುರಾಮ ತಂದೆ ಬಸವರಾಜ ಬಿರೇದಾರ (28) ಶವವಾಗಿರುವ ವಿಷಯ ಅಲ್ಲಿನ ಪೊಲೀಸರಿಗೂ ತಿಳಿದಿದೆ.  ಶಹಾಪುರ ಮತ್ತು ವಿಜಯಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಲ ಶಹಾಪುರದ ಪೊಲೀಸರು  ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ರವಿವಾರ ಆರೋಪಿ ವಾಸೀಂಸಾಬ್ ನನ್ನು ಬಂಧಿಸಿ ಶಹಾಪುರ ನಗರಕ್ಕೆ ಕರೆ ತಂದು ಸ್ಥಳ ಪರಿಶೀಲನೆ ನಡೆಸಲಾಗಿದೆ.

ಕೊಲೆ ಆರೋಪಿ ಕ್ಲೀನರ್ ವಾಸಿಂಸಾಬ ತಂದೆ ಅಲ್ಲಾಭಕ್ಷ (19)ನನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಎ.ಎಸ್.ಪಿ. ಶಿವಪ್ರಕಾಶ ಮಾರ್ಗದರ್ಶನದಲ್ಲಿ ಶಹಾಪುರ ಸಿ.ಪಿ.ಐ. ಅಂಬರಾಯ ಕಮಾನಮನಿ ಮತ್ತು ಎಚ್.ಸಿ.ಹೊನ್ನಪ್ಪ ಭಜಂತ್ರಿ ಸೇರಿದಂತೆ ಪೇದೆಗಳಾದ ಬಾಬು ನಾಯ್ಕಲ್, ಸತೀಶಕುಮಾರ ನರಸನಾಯಕ, ಗಣಪತಿ, ಬಸವರಾಜ, ಗಜೇಂದ್ರ ತಂಡದಲ್ಲಿದ್ದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದರು. ಅಲ್ಲದೆ ಇದೇ ತಂಡ ವಿಜಯಪುರಕ್ಕೆ ತೆರಳಿ ಸೂಕ್ತ ತನಿಖೆ ಕ್ರಮ ಕೈಗೊಂಡು, ಮೃತ ಡ್ರೈವರ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ಕ್ಲೀನರ್ ವಾಸೀಂನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button