ಶಹಾಪುರಃ ಬಟ್ಟೆ ಒಣಗಾಕಲು ಹೋಗಿ ಹಗೇವಿನಲ್ಲಿ ಬಿದ್ದ ಯುವತಿ ಸಾವು
ಬಟ್ಟೆ ಒಣಗಾಕಲು ಹೋಗಿ ಹಗೇವಿನಲ್ಲಿ ಬಿದ್ದ ಯುವತಿ ಸಾವು
ಯಾದಗಿರಿ: ಬಟ್ಟೆ ಒಣಗಾಕಲು ಹೊರಗಡೆ ಬಂದ ಯುವತಿಯೋರ್ವಳು ಮಳೆ ನೀರು ಸಂಗ್ರಹಗೊಂಡಿದ್ದ ಹಗೇವು (ಧಾನ್ಯ ಸಂಗ್ರಹದ ತಗ್ಗು) ನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ. ಸಾಬಮ್ಮ (22) ಎಂಬ ಯುವತಿಯೇ ಹಗೆಯಲ್ಲಿ ಬಿದ್ದು ಮೃತಪಟ್ಟ ದುರ್ದೈವಿ.
ಗುರುವಾರ ರಾತ್ರಿ ಬಹುತೇಕ ಜಿಲ್ಲಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಗ್ರಾಮದಲ್ಲಿ ಸಾಕಷ್ಟು ಹಳೇ ಕಾಲದ ಹಗೆಗಳಿವೆ. ಮಳೆಗೆ ಹಗೆ ತುಂಬ ನೀರು ಸಂಗ್ರಹಗೊಂಡಿದ್ದು, ಸಾಬಮ್ಮ ಶುಕ್ರವಾರ ಬಟ್ಟೆ ಒಣಹಾಕಲು ತೆರಳಿದ್ದಾಗ, ಹಗೆ ಎಂಬುದು ಗೋಚರಿಸದೆ ಹಾಗೇ ನೀರಲ್ಲಿ ನಡೆದುಕೊಂಡು ಸಾಗುತ್ತಿರುವಾಗ ಹಗೆಯಲ್ಲಿ ಮುಳುಗಿದ್ದಾಳೆ. ಅತೀ ಆಳವಾಗಿದ್ದ ಹಗೆಯಲ್ಲಿ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಈ ಕುರಿತು ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಬೆಂಡೆಬಂಬಳಿ, ಕೊಂಕಲ, ಐಕೂರ ಭಾಗದಲ್ಲಿ ಸಾಕಷ್ಟು ಹಗೆಗಳು ಅಂದರೆ ದವಸಧಾನ್ಯ ಸಂಗ್ರಹ ಮಾಡಲು ಹಿರಿಯರಕಾಲದಿಂದಲೂ ಹಗೆಗಳಿವೆ. ಪ್ರಸ್ತುತ ಅವುಗಳು ಜಾಸ್ತಿ ಬಳಸುತ್ತಿಲ್ಲ. ಆದಾಗ್ಯು ಅವುಗಳನ್ನು ಮುಚ್ಚಿಸುವ ಗೋಜಿಗೆ ಮಾತ್ರ ಸ್ಥಳೀಯ ಗ್ರಾಪಂ ಆಡಳಿತ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಮಾತ್ರ ದುರಂತ.
ಸಾಕಷ್ಟು ಬಾರಿ ಹಗೆಯಲ್ಲಿ ಬಿದ್ದ ಮಕ್ಕಳು, ವೃದ್ಧರು ಸಾವನ್ನಪ್ಪಿದ ಘಟನೆಗಳು ಜರುಗಿವೆ. ಕಳೆದ ವರ್ಷವೇ ಯುವತಿಯೋರ್ವಳು ಹಗೆಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆಯ ನೆನಪು ಮಾಸಿಲ್ಲ. ಅಷ್ಟರಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಸಾಕಷ್ಟು ಅವಘಡಗಳು ನಡೆಯುತ್ತಿದ್ದರೂ, ಆಯಾ ಗ್ರಾಪಂ ವ್ಯಾಪ್ತಿ ಹಗೆ ಮುಚ್ಚುವ ಕುರಿತು ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೃತ ಯುವತಿಯ ಕುಟಂಬಸ್ಥರ ರೋದನೆ ಮುಗಿಲು ಮುಟ್ಟಿದೆ.
Rip
S…so sad