ಬಿಸಿಎಂ ವಿಸ್ತೀರಣಾಧಿಕಾರಿ ಮತ್ತು ಮೇಲ್ವಿಚಾರಕರ ಮಧ್ಯ ಸಂಘರ್ಷ, ವಿದ್ಯಾರ್ಥಿಗಳ ಪರದಾಟ
ಬಿಸಿಎಂ ಹಾಸ್ಟಲ್ ಮೇಲ್ವಿಚಾರಕರ ಸಾಮೂಹಿಕ ರಜೆ ಪ್ರಕರಣ
ಉಪವಾಸದಲ್ಲಿ ವಿದ್ಯಾರ್ಥಿಗಳುಃ ತಹಸೀಲ್ ಕಚೇರಿಗೆ ಮುತ್ತಿಗೆ ಆಕ್ರೋಶ
ಯಾದಗಿರಿಃ ಕಳೆದ ಮೂರು ದಿನದಿಂದ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಲವು ವಸತಿ ನಿಲಯಗಳಿಗೆ ಸಮರ್ಪಕ ಊಟದ ವ್ಯವಸ್ಥೆ ಮಾಡದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಗುರುವಾರ ಜಿಲ್ಲೆಯ ಶಹಾಪುರ ನಗರದ ತಹಸೀಲ್ ಕಚೇರಿಗೆ ಮುತ್ತಿಗೆ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಮೇಲ್ವಿಚಾರಕರು ಮತ್ತು ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರಿ ವಿಸ್ತರಣಾಧಿಕಾರಿ ನಡುವೆ ಕಳೆದ ಮೂರು ದಿನಗಳಿಂದ ನಡೆದ ಒಳ ಜಗಳ ತಾರಕಕ್ಕೇರಿದ್ದು, ಈ ಮಧ್ಯೆ ವಸತಿ ನಿಲಯದ ವಿದ್ಯಾರ್ಥಿಗಳು ಉಪವಾಸ ಬೀಳುವಂತಾಗಿದೆ.
ಹೋಗಾಗಿ ಆಕ್ರೋಶಗೊಂಡ ವಿದ್ಯಾರ್ಥಿಗಳು ಗುರುವಾರ ತಹಸೀಲ್ ಕಚೇರಿಗೆ ಮುತ್ತಿಗೆ ಹಾಕಿ ತಾಲೂಕು ದಂಡಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ನಾವೆಲ್ಲ ಮೂರು ದಿನದಿಂದ ಉಪವಾಸವಿದ್ದೇವೆ. ಮೇಲ್ವಿಚಾರಕರು ರಜೆ ಸಾಮೂಹಿಕ ರಜೆ ನೀಡಿದ್ದು, ನಮ್ಮ ವಸತಿ ನಿಲಯಗಳ ನಿರ್ವಹಣೆ ಮಾಡುವವರು ಯಾರು ಇಲ್ಲ. ವಸತಿ ನಿಲಯಕ್ಕೆ ಯಾವೊಬ್ಬ ಅಧಿಕಾರಿಯು ಬಾರದೆ ನಮ್ಮನ್ನು ಉಪವಾಸ ದೂಡಿದ್ದಾರೆ. ಮೇಲಧಿಕಾರಿಗಳ ಜತೆ ಕದನ ನಡೆದಿದ್ದು, ಅದು ಅವರ ವಯಕ್ತಿಕ ವಿಚಾರ, ನಮ್ಮನ್ನೇಕೆ ಉಪವಾಸ ಹಾಕುತ್ತಿದ್ದಾರೆ. ಕೂಡಲೇ ಬದಲಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ತಕ್ಷಣಕ್ಕೆ ಸ್ಪಂಧಿಸಿದ ತಹಸೀಲ್ದಾರ
ಆಯ ವಸತಿ ನಿಲಯದಲ್ಲಿ ಅಡುಗೆ ಕೆಲಸ ಮಾಡುವವರನ್ನು ಕರೆದು ಕೂಡಲೇ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲು ತಹಸೀಲ್ದಾರ ಸೋಮಶೇಖರ ಅವರು, ಖಡಕ್ ಆಗಿ ಸೂಚಿಸಿದ್ದು, ಇಲ್ಲವಾದಲ್ಲಿ ಅಮಾನತುಗೊಳಿಸಲಾಗುವುದು ಎಂದು ಎಚ್ಚರಿಕೆ ಸಹ ನೀಡಿದ್ದು, ತಕ್ಷಣ ಕರ್ತವ್ಯಕ್ಕೆ ಹಾಜರಾಗಲು ಅಡುಗೆ ಕೆಲಸ ಮಾಡುವವರು ತೆರಳಿದ್ದಾರೆ. ಹೀಗಾಗಿ ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಹಸೀಲ್ದಾರರು ವಿನಯವಾಣಿಗೆ ತಿಳಿಸಿದರು.
ಮೇಲ್ವಿಚಾರಕರು ಮತ್ತು ಬಿಸಿಎಂ ವಿಸ್ತರಣಾ ಅಧಿಕಾರಿಗಳ ನಡುವೆ ನಡೆದ ಒಳ ಸಂಘರ್ಷದಿಂದ ಸಮಸ್ಯೆ ಉಂಟಾಗಿತ್ತು. ಪ್ರಸ್ತುತ ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿನ್ನೆಲೆಃ ತಾಲೂಕಿನ ಹಿಂದುಳದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರಿ ವಿಸ್ತರಣಾಧಿಕಾರಿ ಅನೀತಾ ಬಿ. ದೋರನಹಳ್ಳಿ ಅವರು ವಸತಿ ನಿಲಯದ ಮೇಲ್ವಿಚಾರಕರ ಮೇಲೆ ಅಧಿಕಾರ ಅಸ್ತ್ರ ಬಳಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸುಮಾರು 13 ಜನ ಮೇಲ್ವಿಚಾರಕರು ಸಾಮೂಹಿಕ ರಜೆ ನೀಡುವ ಮೂಲಕ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರನ್ನು ಸಹ ನೀಡಿದ್ದರು.
ಈ ಕುರಿತು ಉಂಟಾದ ಸಮಸ್ಯೆ ವಿದ್ಯಾರ್ಥಿಗಳಿಗೆ ಬಿಸಿ ತಟ್ಟಿದೆ ಎನ್ನಬಹುದು. ವಿಸ್ತೀರಣಾಧಿಕಾರಿ ಅನೀತಾ ಮತ್ತು ಹಲವು ಮೇಲ್ವಿಚಾರಕರ ನಡುವೆ ಉಂಟಾದ ಸಂಘರ್ಷ. ಪ್ರಸ್ತುತ ಹಂತ ತಾರಕಕ್ಕೇರಿದೆ ಎನ್ನಬಹುದು. ಈ ಕುರಿತು ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಇಲಾಖೆಯಲ್ಲಿ ಉಂಟಾದ ಸಂಘರ್ಷ ಶಮನಗೊಳಿಸಬೇಕಿದೆ. ಇಲ್ಲವಾದಲ್ಲಿ ಇದು ಮುಂದುವರೆದಲ್ಲಿ ಪ್ರಸಕ್ತ ಪರೀಕ್ಷಾ ಸಮಯವಾಗಿದ್ದರಿಂದ ಮಕ್ಕಳಿಗೆ ಸಮಸ್ಯೆಯಾಗಲಿದೆ. ಅಧಿಕಾರಿ ಮತ್ತು ಮೇಲ್ವಿಚಾರಕರ ಒಳ ಜಗಳ ಮಕ್ಕಳ ಪರೀಕ್ಷೆ ಮೇಲೆ ಪರಿಣಾಮ ಬೀರಲಿದೆ. ಮಕ್ಕಳಿಗೆ ಊಟದ ಅವ್ಯವಸ್ಥೆ, ಇತರೆ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆ ಬಿವಿಎಸ್ ತಿಳಿಸಿದೆ.