ಕಲಬುರಗಿಯಲ್ಲಿ ತಿಂಗಳೊಳಗೆ ವಿಮಾನಯಾನ ಶುರು – ಸಿಎಂ ಯಡಿಯೂರಪ್ಪ
ಕಲಬುರಗಿ : ರಾಜ್ಯ ಸರ್ಕಾರವೇ 175.57 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಲಬುರಗಿ ವಿಮಾನ ನಿಲ್ದಾಣವು ವಾಣಿಜ್ಯ ಹಾರಾಟಕ್ಕೆ ಸಜ್ಜಾಗಿದ್ದು, ಇದರ ಲೋಕಾರ್ಪಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದ್ದು ತಿಂಗಳೊಳಗೆ ವಿಮಾನಯಾನ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಮಂಗಳವಾರ ಕಲಬುರಗಿ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಉದ್ಘೋಷಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವಿಮಾನದಲ್ಲಿ ಹಾರಾಡಬೇಕೆಂಬ ಇಲ್ಲಿನ ಜನರ ದಶಕದ ಕನಸು ಈಡೇರಲಿದೆ. ವಿಮಾನಯಾನ ಸೇವೆ ಆರಂಭದಿಂದ ಕೈಗಾರಿಕೋದ್ಯಮಿಗಳು ಇಲ್ಲಿ ಹೂಡಿಕೆ ಮಾಡಲಿದ್ದು, ದುಡಿಯುವ ಕೈಗಳಿಗೆ ಕೆಲಸ ಸಿಗಲಿದೆ. ಆ ಮೂಲಕ ಇಲ್ಲಿ ನಿರುದ್ಯೋಗ ನಿವಾರಣೆಯಾಗಿ ಜನರ ಕಲ್ಯಾಣವಾಗಲಿದೆ ಎಂದರು.
ಮುಂದಿನ ಅಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಈ ಭಾಗದ ಜಿಲ್ಲೆಗಳನ್ನು ರಾಜ್ಯದ ಮಾದರಿ ಜಿಲ್ಲೆಯನ್ನಾಗಿ ಮಾಡಲಾಗುವುದು. ಇದಲ್ಲದೇ ಹೈ.ಕ. ವಿಶೇಷ ಕೋಶದ ಪ್ರಾದೇಶಿಕ ಕಚೇರಿ ಕಲಬುರಗಿಯಲ್ಲಿ ಸ್ಥಾಪಿಸುವುದಲ್ಲದೇ ಈ ಭಾಗದ ಸರ್ವಾಂಗೀಣ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಸಹ ಸ್ಥಾಪಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹಿಂದುಳಿದ ಹಣೆಪಟ್ಟಿಯನ್ನು ಹೋಗಲಾಡಿಸಲು ಸಂಪುಟದ ಸಹೋದ್ಯೋಗಿಗಳಿಗೆ ಆದೇಶ ನೀಡಿದ್ದೇನೆ ಎಂದರು.
ಭಕ್ತಿ, ಸಾಹಿತ್ಯ, ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸೆದ ಜಗತ್ತಿನ ಅತ್ಯಪೂರ್ವ ಚಳುವಳಿಯೊಂದು ರೂಪಗೊಂಡು 12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಇದು. ಹೀಗಾಗಿ ಇಲ್ಲಿನ ಜನರ ಭಾವನೆಯಂತೆ ಹೈದ್ರಾಬಾದ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ” ಎಂದು ಮರುನಾಮಕರಣ ಮಾಡಲಾಗಿದೆ. ಈ ಭಾಗದ ಸಮಗ್ರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯ ಮತ್ತು ಪ್ರಾದೇಶಿಕ ಅಸಮಾತೋಲನ ನಿವಾರಣೆಯೆ ನಮ್ಮ ಮುಂದಿನ ಗುರಿಯಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ನುಡಿದರು.
ನಾಡಿನ ಆರೂವರೆ ಕೋಟಿ ಜನರ ಆಶೀರ್ವಾದಿಂದ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ 6000 ರೂ.ಗಳ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 4,000 ರೂ. ನೀಡಲು ಘೋಷಣೆ ಮಾಡಿದ್ದೇನೆ ಎಂದರು.
ಕಲ್ಯಾಣ ಕರ್ನಾಟಕ ಭಾಗ ಭಾರತದ ಅತ್ಯಂತ ಒಣ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಸತತ ಬರಗಾಲಗಳ ಕಾರಣ ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿತ್ತು. ಡಾ. ಡಿ. ಎಂ. ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದ 39 ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ 21 ತಾಲೂಕುಗಳು ಈ ಭಾಗಕ್ಕೆ ಸೇರಿವೆ. 2006ರಲ್ಲಿ ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯಲ್ಲಿ ನಡೆದ ಮೊದಲ ವಿಧಾನ ಮಂಡಲದ ಅಧಿವೇಶನದಲ್ಲಿ ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸಿನನ್ವಯ ವಿಶೇಷ ಅಭಿವೃದ್ಧಿ ಯೋಜನೆ ಜಾರಿ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮುಂದುವರೆಸುವ ಅನಿವಾರ್ಯತೆ ಎದುರಾಗಿದೆ. ಈ ವಿಶೇಷ ಅಭಿವೃದ್ಧಿ ಯೋಜನೆ ಹಿಂದುಳಿದ ತಾಲ್ಲೂಕುಗಳಲ್ಲಿ ಗಣನೀಯ ಬದಲಾವಣೆಯನ್ನು ತಂದಿದೆ. 2007-08 ರಿಂದ ಈ ವರೆಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಒಟ್ಟು 7,973.78 ಕೋಟಿ ರೂ. ಬಿಡುಗಡೆಯಾಗಿದ್ದು, 7,483.72 ಕೋಟಿ ರೂ. ವೆಚ್ಚವಾಗಿದೆ ಎಂದರು.
ಸಂವಿಧಾನದ 371(ಜೆ) ಪರಿಚ್ಛೇದ ಜಾರಿಯಿಂದ ಉದ್ಯೋಗ ಮೀಸಲಾತಿಯಡಿ ಪ್ರಾದೇಶಿಕ ಸ್ಥಳೀಯ ವೃಂದ ಮತ್ತು ರಾಜ್ಯ ಮಟ್ಟದ ಸ್ಥಳೀಯ ವೃಂದದಲ್ಲಿ ಒಟ್ಟು 32,144 ಖಾಲಿ ಹುದ್ದೆಗಳನ್ನು ಗುರುತಿಸಲಾಗಿದೆ. ಇವುಗಳ ಪೈಕಿ ಜುಲೈ-2019ರ ಅಂತ್ಯಕ್ಕೆ 13,659 ಹುದ್ದೆಗಳನ್ನು ಸ್ಥಳೀಯ ಅಬ್ಯರ್ಥಿಗಳಿಂದಲೆ ತುಂಬಲಾಗಿದೆ. ಇನ್ನೂ 10,748 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ವಿವಿಧ ಹಂತದಲ್ಲಿದ್ದು, ಅವುಗಳನ್ನು ಸಹ ಶೀಘ್ರದಲ್ಲಿಯೆ ಭರ್ತಿ ಮಾಡುವ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು. ಇದಲ್ಲದೆ ¥್ರÀತಿ ವರ್ಷ 700ಕ್ಕೂ ಹೆಚ್ಚು ವೈದ್ಯಕೀಯ ಮತ್ತು ಸಾವಿರಾರು ಸಂಖ್ಯೆಯಲ್ಲಿ ಇಂಜಿನೀಯರಿಂಗ್ ಸೇರಿದಂತೆ ವೃತ್ತಿಪರ ಉನ್ನತ ಕೋರ್ಸುಗಳಲ್ಲಿ ಅಧ್ಯಯನ ಮಾಡಲು ಈ ಭಾಗದ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿರುವುದು ಅವರ ಉಜ್ವಲ ಭವಿಷ್ಯಕ್ಕೆ ಬುನಾದಿಯಾಗಿದೆ ಎಂದರು.
ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಳೆದ 2013-14ನೇ ಸಾಲಿನಿಂದ 2019-20ನೇ ಸಾಲಿನ ವರೆಗೆ ಒಟ್ಟು 6,753.50 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇದೂವರೆಗೆ 4005 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, 3,566.74 ಕೋಟಿ ರೂ. ಅನುದಾನ ವೆಚ್ಚವಾಗಿದೆ ಎಂದು ತಿಳಿಸಿದರು.