ಪ್ರಮುಖ ಸುದ್ದಿ
ಯಾದಗಿರಿಗೆ ರೈಲಿನಲ್ಲಿ ಬರ್ತಾರಂತೆ ಸಿಎಂ ಕುಮಾರಸ್ವಾಮಿ!
ಯಾದಗಿರಿ: ಜೂನ್ 21ರಂದು ಯಾದಗಿರಿ ಜಿಲ್ಲೆ ಗುರುಮಿಠ್ಕಲ್ ತಾಲೂಕಿನ ಚಂಡರಕಿ ಗ್ರಾಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಿಎಂ ವಾಸ್ತವ್ಯ ಹೂಡಲಿದ್ದು ಭರದಿಂದ ಸಿದ್ಧತೆ ಸಾಗಿದೆ.
ಇನ್ನು ಜೂನ್ 20ರಂದು ಕರ್ನಾಟಕ ಎಕ್ಸ್ ಪ್ರೆಸ್ ರೈಲಿನ ಮೂಲಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರಿನಿಂದ ಯಾದಗಿರಿಗೆ ಬರಲಿದ್ದಾರೆ. ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಬದಲು ರೈಲಿನ ಮೂಲಕ ಸಿಎಂ ಯಾದಗಿರಿಗೆ ಆಗಮಿಸುತ್ತಿರುವುದು ವಿಶೇಷ. 21ರಂದು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆ ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಿದ್ದಾರೆ.