‘ಉತ್ತಮ ಭವಿಷ್ಯವಿದೆ ನಿನಗೆ, ಯೋಚಿಸಿ ಮಾತಾಡು’ ಸಂಸದ ಪ್ರತಾಪ ಸಿಂಹಗೆ ಸಿಎಂ ಸಲಹೆ!
ಮೈಸೂರು: ಕಳೆದ ಕೆಲ ದಿನಗಳಿಂದ ಮೈಸೂರಿನ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಅಂತೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೂ ಸಹ ಪ್ರತಾಪ ಸಿಂಹ ಬಗ್ಗೆ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ಟೀಕಾಸ್ತ್ರ ತಾರಕಕ್ಕೇರಿದೆ. ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಮತ್ತು ಸಂಸದ ಪ್ರತಾಪ ಸಿಂಹ ಇಬ್ಬರೂ ಒಂದೇ ವೇದಿಕೆಯಲ್ಲಿ ಮುಖಾಮುಖಿ ಆಗಿದ್ದಾರೆ.
ವಿಜಯ ನಗರದ ವಿದ್ಯಾವರ್ಧಕ ಕಾಲೇಜು ಆವರಣದಲ್ಲಿ ನಡೆದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಕೆ.ಪುಟ್ಟಸ್ವಾಮಿ ಅವರ ಪುಥ್ಥಳಿ ಅನಾವರಣದ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಮತ್ತು ಸಂಸದ ಪ್ರತಾಪ ಸಿಂಹ ಎದುರಾದರು. ತಕ್ಷಣಕ್ಕೆ ಸಂಸದ ಪ್ರತಾಪ ಸಿಂಹರತ್ತ ನೋಡುತ್ತ ಏನಪ್ಪ, ವಿರಾಟ್ ಕೊಹ್ಲಿ ಥರಾ ಕಾಣಸ್ತಿದೀಯಾ? ಎಂದು ಸಿಎಂ ಸಿದ್ಧರಾಮಯ್ಯ ಪ್ರತಾಪ ಸಿಂಹರನ್ನು ಮಾತನಾಡಿಸಿದರು. ನಗುತ್ತಲೇ ನಮಸ್ಕರಿಸಿದ ಸಂಸದ ಪ್ರತಾಪ ಸಿಂಹ ಸಿಎಂಗೆ ಗೌರವ ಸೂಚಿಸಿದ್ದಾರೆ. ಬೆಳೆಯುವ ಹುಡುಗ ನೀನು, ನಿನಗೆ ಉತ್ತಮ ಭವಿಷ್ಯವಿದೆ. ಆದರೆ, ಸ್ವಲ್ಪ ಯೋಚಿಸಿ ಮಾತನಾಡು ಎಂದು ಸಿಎಂ ಸಲಹೆ ನೀಡಿದ್ದಾರೆ. ಆಗ ಮಂಜುಳಾ ಮಾನಸ ಅವರತ್ತ ತೋರಿಸಿ ಬುದ್ಧಿ ಹೇಳುವಂತೆ ಸಂಸದ ಪ್ರತಾಪ ಸಿಂಹ ತೋರಿಸಿದಾಗ ಅವರಿಗೂ ಆಮೇಲೆ ಬುದ್ಧಿ ಹೇಳ್ತೀನಿ ಅಂತ ಸಿಎಂ ಹೇಳಿದ್ದಾರೆಂದು ತಿಳಿದು ಬಂದಿದೆ. ಈ ಸ್ವಾರಸ್ಯಕರ ಘಟನೆ ಸಭಿಕರ ಗಮನ ಸೆಳೆದಿದ್ದು ರಾಜ್ಯದಲ್ಲೆಡೆ ಹರಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.