ಪ್ರಗತಿಪರರು ಅಂದರೆ ಯಾರು? ಹೀಗೆ ಪ್ರಶ್ನಿಸಿದ್ದು ಅನಂತಕುಮಾರ್ ಹೆಗಡೆ ಅಲ್ಲ ಸ್ವಾಮಿ, ಸಿಎಂ ಸಿದ್ಧರಾಮಯ್ಯ?
ಚಿತ್ರದುರ್ಗ: ಪ್ರಗತಿಪರರು, ಜಾತ್ಯಾತೀತರು, ವಿಚಾರವಾದಿಗಳ ವಿರುದ್ಧ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ತೀವ್ರ ವಾಗ್ದಾಳಿ ನಡೆಸಿದ್ದು ಹಳೇ ಸುದ್ದಿ. ಹೆಗಡೆ ಹೇಳಿಕೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹೆಗಡೆ ಅವರ ಸ್ವಪಕ್ಷ ಬಿಜೆಪಿಯಲ್ಲೇ ಭಾರೀ ವಿರೋಧ ವ್ಯಕ್ತವಾಗಿದೆ ಎಂಬ ಸುದ್ದಿ ಕೂಡ ಇದೆ. ಅಲ್ಲದೆ ಬಿಜೆಪಿ ಹೈಕಮಾಂಡ್ ಕೂಡ ಅನಂತಕುಮಾರ್ ಹೆಗಡೆ ಮಾತಿಗೆ ಕಡಿವಾಣ ಹಾಕಲಿದ್ದಾರೆ ಎನ್ನಲಾಗುತ್ತಿದೆ.
ಆದರೆ. ಪ್ರಗತಿಪರ ನಿಲುವಳ್ಳವರೆಂಬ ಕಾರಣಕ್ಕೆ ನಾಡಿನ ಬಹುತೇಕ ಪ್ರಗತಿಪರರು ಬೆಂಬಲಿಸುವ ಸಿಎಂ ಸಿದ್ಧರಾಮಯ್ಯನವರೇ ಇಂದು ಪ್ರಗತಿಪರರು ಅಂದರೆ ಯಾರು ಎಂದು ಪ್ರಶ್ನಿಸಿದ್ದಾರೆ. ಹೌದು, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಇದಕ್ಕೂ ಮುನ್ನ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಪ್ರಗತಿಪರರು ಅಂದರೆ ಯಾರು ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದರು.
ಜಾತ್ಯಾತೀತರು, ವಿಚಾರವಾದಿಗಳ ವಿರುದ್ಧ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ಪ್ರಗತಿಪರರ ಪರವಾಗಿ ನಿಂತಿಲ್ಲ, ಪ್ರತಿಭಟನೆಯನ್ನೂ ಸಹ ಮಾಡಿಲ್ಲವಲ್ಲ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದ ಸಿಎಂ ಪ್ರಗತಿಪರರು ಅಂದರೆ ಯಾರು ಅಂದಿದ್ದಾರೆ. ಯಾವ ಪ್ರಗತಿಪರರ ಮೇಲೆ ದಾಳಿ ನಡೆದಿದೆ ಹೇಳಿ ನಮಗೆ ಗೊತ್ತಾಗಬೇಕಲ್ಲ. ಏನು ಮಾಡಬೇಕು ಹೇಳಿ, ಕಾಂಗ್ರೆಸ್ ಪಾರ್ಟಿಯವರಿಗೆ ಹೇಳುತ್ತೇನೆ ಎಂದು ಹೇಳಿದ್ದಾರೆ. ಆ ಮೂಲಕ ಸಿಎಂ ಸಿದ್ಧರಾಮಯ್ಯ ಪ್ರಗತಿಪರರಿಗೆ ಶಾಕ್ ನೀಡಿದ್ದಾರೆ.