ಅಹಿಂದ ಮತಬೇಟೆಗೆ ಸಿಎಂ ಸಿದ್ಧರಾಮಯ್ಯ ಸ್ಕೆಚ್!
ಬೆಂಗಳೂರಿನಲ್ಲಿ ಮಠಗಳಿಗೆ ಜಮೀನು ನೀಡುವ ಭರವಸೆ
ಬೆಂಗಳೂರು: ಹಿಂದುಳಿದ ಮತ್ತು ದಲಿತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ಇಂದು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸ್ವಾಮೀಜಿಗಳು ಸಿಎಂ ಭೇಟಿ ಮಾಡಿದರು. ಈ ವೇಳೆ ಹಿಂದುಳಿದ ಮತ್ತು ದಲಿತ ಮಠಗಳಿಗೆ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ಬೆಂಗಳೂರಿನಲ್ಲಿ ಸ್ಥಳಾವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಈ ಹಿಂದಿನಿಂದಲೂ ಬೆಂಗಳೂರು ನಗರದಲ್ಲಿ ಮಠಗಳಿಗೆ ಜಾಗ ನೀಡುವ ಬೇಡಿಕೆ ಇದೆ. ಹಿಂದುಳಿದ , ದಲಿತ ಸಮುದಾಯದ ಮಠಗಳಿಗೆ ಜಮೀನು ನೀಡುವ ಮೂಲಕ ಸಮುದಾಯಗಳ ಅಭಿವೃದ್ಧಿಗೆ ಸಹಕರಿಸಬೇಕೆಂದು ಸ್ವಾಮೀಜಿಗಳು ಮನವಿ ಮಾಡಿದರು. ಸ್ವಾಮೀಜಿಗಳ ಬೇಡಿಕೆಗೆ ತಕ್ಷಣ ಸ್ಪಂದಿಸಿರುವ ಸಿಎಂ ಸಿದ್ಧರಾಮಯ್ಯ ಬೆಂಗಳೂರು ನಗರ ಪ್ರದೇಶದಲ್ಲಿ ಮಠಗಳಿಗೆ ಜಮೀನು ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಸಿಎಂ ಭೇಟಿ ಬಳಿಕ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಿಂದುಳಿದ ಮತ್ತು ದಲಿತ ಮಠಾಧೀಶರ ಒಕ್ಕೂಟದ ಅದ್ಯಕ್ಷರಾದ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿಶ್ರೀ, ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಕುಂಚಿಟಿಗ ಗುರುಪೀಠದ ಶಾಂತವೀರಶ್ರೀ ಸೇರಿದಂತೆ ವಿವಿಧ ಮಠದ ಸುಮಾರು 40ಜನ ಸ್ವಾಮೀಜಿಗಳು ಸಿಎಂ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಹಿಂದುಳಿದ ಮತ್ತು ದಲಿತ ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.