ಜೈಲಿಗೆ ಹೋಗಿ ಬಂದವರಿಂದ ಪಾಠ ಕಲಿಬೇಕಿಲ್ಲಃ ಸಿಎಂ ಸಿದ್ರಾಮಯ್ಯ ಲೇವಡಿ
2018ರಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ:ಸಿದ್ರಾಮಯ್ಯ
ಸಾವಿರ ಅಮಿತ್ ಶಾ ಮತ್ತು ಮೋದಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ , ಜನ ಕಾಂಗ್ರೆಸ್ ಪರ ಇದ್ದಾರೆ..!
ಕೋಲಾರಃ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಯಡಿಯೂರಪ್ಪ ಇಬ್ಬರು ಭ್ರಷ್ಟಾಚಾರ ಆರೋಪದಡಿ ಜೈಲಿಗೆ ಹೋಗಿ ಬಂದವರು. ಅವರು ಈಗ ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಅಂಥವರ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಎಂದು ಸಿಎಂ ಸಿದ್ರಾಮಯ್ಯ ಲೇವಡಿ ಮಾಡಿದರು.
ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂತಹ ಸಾವಿರ ಅಮಿತ್ ಶಾ ಮತ್ತು ಮೋದಿಗಳು ಬಂದರೂ ಏನು ಮಾಡಲಾಗುವುದಿಲ್ಲ. ಏಕೆಂದರೆ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಬಿಜೆಪಿಯದ್ದು ಮನ್ ಕಿ ಬಾತ್ ನಮ್ದು ಏನಿದ್ದರೂ ಕಾಮ್ ಬಾತ್. ಹೀಗಾಗಿ, ಜನ ಅಭಿವೃದ್ಧಿ ಪರವಾಗಿದ್ದಾರೆ. ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಜ.1 ರಿಂದ ಎಲ್ಲಾ ಜಿಲ್ಲಾ ಕೇಂದ್ರ , ಬಸ್ ನಿಲ್ದಾಣ, ಆಸ್ಪತ್ರೆಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿವೆ. ಇದು ನಮ್ಮ ಸರ್ಕಾರದ ಮಹತ್ವದ ಯೋಜನೆ. ಯಡಿಯೂರಪ್ಪ ಯಾವಾಗಲೂ ಸೈಕಲ್ ಕೊಟ್ಟಿದೀನಿ, ಸೀರೆ ಕೊಟ್ಟಿದ್ದೀನಿ ಎಂದು ಹೇಳ್ಕೊಂಡು ಅಡ್ಡಾಡ್ತೀರ್ತಾರೆ. ಬಿಜೆಪಿ ಮಿಷನ್-150 ಎಂದೋರು ಅಮಿತ್ ಶಾ ಬಂದ ಮೇಲೆ 150 ಪ್ಲಸ್ ಅಂತಿದ್ದಾರೆ ಎಂದು ಲೇವಡಿ ಮಾಡಿದರು.
ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೆ ಸತ್ಯ. ಅದಕ್ಕಾಗಿ ಕಾರ್ಯಕರ್ತರು ಶಪತ ಮಾಡಬೇಕಿದೆ ಎಂದ ಅವರು, ಕಳೆದ ವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಕೋಲಾರದ ಗಣಪತಿ ಹಾಗೂ ಆಂಜನೇಯಗೆ ಪೂಜೆ ಸಲ್ಲಿಸಿ, ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ್ದೆವು. ಈಗಲೂ 2018ರ ಚುನಾವಣೆಗೂ ಮುಂಚಿತವಾಗಿ ಇಲ್ಲಿಂದಲೆ ಪೂಜೆ, ಪ್ರಾರ್ಥನೆ ಮಾಡಿ ಪ್ರಚಾರ ಆರಂಭಿಸಿದ್ದೇವೆ. ಅಲ್ಲದೆ ಈ ಬಾರಿ ವಿಶೇಷವಾಗಿ ಮಳೆ ಬಂದಿದ್ದರಿಂದ ಮತ್ತಷ್ಟು ಶುಭ ಸೂಚನೆ ದೊರೆತಿದೆ. ಈ ಭಾಗದಿಂದ ಪ್ರಚಾರ ಆರಂಭ ಮಾಡಿದ ನಮಗೆ ಯಶಸ್ಸು ಸಿಗುತ್ತೆ ಎಂಬ ನಂಬಿಕೆ ಇಟ್ಕೊಂಡಿದ್ದೇವೆ ಎಂದರು.
ಸಮಾರಂಭಕ್ಕೆ ಚಾಲನೆ ದೊರೆಯುತ್ತಿದ್ದಂತೆ ಅಪಾರ ಮಳೆ ಸುರಿದ ಕಾರ್ಯಕ್ರಮಕ್ಕೆ ಅಡ್ಡಿಯಾಯಿತು. ಆದರೂ ಸಿಎಂ ಹಾಗೂ ಅವರ ಟೀಂ ಖುಷಿಯಿಂದಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಪಾರ ಪ್ರಮಾಣದಲ್ಲಿ ಕಾರ್ಯಕರ್ತರು ಮಳೆಯನ್ನು ಲೆಕ್ಕಿಸದೆ ಸಮಾವೇಶದಲ್ಲಿ ಭಾಗವಹಿಸಿದ್ದರು. ಸಚಿವರಾದ ರಮೇಶಕುಮಾರ್, ಮಹಾದೇವಪ್ಪ ಮತ್ತು ಡಿ.ಕೆ.ಶಿವಕುಮಾರ ಸೇರಿ ಅನೇಕ ನಾಯಕರು ಸಿಎಂ ಅವರಿಗೆ ಸಾಥ್ ನೀಡಿದರು.