ಸಿಎಂ ಸಿದ್ರಾಮಯ್ಯ ವಿರುದ್ಧ ಮಾಜಿ ಸಚಿವ ಹೆಚ್.ವಿಶ್ವನಾಥ ವಾಗ್ದಾಳಿ
ಸಿಎಂ ಸಿದ್ರಾಮಯ್ಯ ವಿರುದ್ಧ ಮಾಜಿ ಸಚಿವ ಹೆಚ್.ವಿಶ್ವನಾಥ ವಾಗ್ದಾಳಿ
ಮೈಸೂರು: ಸಿಎಂ ಸಿದ್ರಾಮಯ್ಯ, ನಿನ್ನೆ ಮೈಸೂರಿನ ಖಾಸಗಿ ಹೊಟೇಲ್‍ವೊಂದರಲ್ಲಿ ನಡೆಸಿದ ಹುಣಸೂರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕುರುಬ ಸಮಾಜದವರು ಯಾರು ಹೆಚ್.ವಿಶ್ವನಾಥ ಅವರಿಗೆ ಮತ ಹಾಕಬೇಡಿ ಎಂದು ನನ್ನ ವಿರುದ್ಧ ಮಾತನಾಡಿದ್ದಾರೆ. ನನಗೆ ಮತ ಹಾಕಬೇಡಿ ಎಂದು ಹೇಳಲು ನಿಮ್ಮ ಬಳಿ ಯಾವ ಕಾರಣವಿದೆ ಹೇಳಿ ಸಿದ್ರಾಮಯ್ಯನವರೇ.? ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಹೆಚ್.ವಿಶ್ವನಾಥ ಖಾರವಾಗಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ನನಗೇನು ಚುನಾವಣೆ ನಿಲ್ಲಲ್ಲು ಅರ್ಹತೆ ಇಲ್ಲವೇ.? ಜಾತಿ ಆಧಾರದ ಮೇಲೆ ಚುನಾವಣೆ ಮಾಡುತ್ತೀರಾ ನೀವು.? ಕುರುಬ ಸಮಾಜದವರು ಮತ ಹಾಕಬೇಡಿ ಎಂದು ಹೇಳಲು ನಿಮಗೆ ಯಾವ ಅಧಿಕಾರವಿದೆ.? ಒಬ್ಬ ಮುಖ್ಯಮಂತ್ರಿಯಾಗಿ ಪ್ರಜಾಪ್ರಭುತ್ವದ ವಿರುದ್ಧ ಹೇಳಿಕೆ ನೀಡುವುದು ಸಮಂಜಸವೇ..? ಜನತಂತ್ರ ವ್ಯವಸ್ಥೆಯಲ್ಲಿ ಮತ ಕೇಳಬೇಕೆ ಹೊರತು, ಇಂತವರಿಗೆ ಮತ ಹಾಕಬೇಡಿ ಎಂದು ಹೇಳೋ ಅಧಿಕಾರ ಯಾರಿಗೂ ಇಲ್ಲ ಅಂದಿದ್ದಾರೆ.
ಸಿದ್ರಾಮಯ್ಯ ನಾನು ಮುಖ್ಯಮಂತ್ರಿ, ನನ್ನ ಮಾತು ಎಲ್ಲರೂ ಕೇಳಬೇಕು ಅಂದ್ಕೊಂಡಿದ್ದಾರೆ. ಅದು ಸಾಧ್ಯವಿಲ್ಲ. ಸಿಎಂ ಆಗುವ ಮುನ್ನ ನಿಮ್ಮ ಜೊತೆಯಲ್ಲಿ ಯಾರಿದ್ದರು ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಿ. ಬೈ ಎಲೆಕ್ಷನ್ ಅಲ್ಲಿ ಕೋಣನಕುಂಟೆ ಗ್ರಾಮದ ಮುಖಂಡರೊಬ್ಬರ ಮನೆಯಲ್ಲಿ ಅಳುತ್ತಾ ಕುಳಿತಿದ್ದಿರಿ. ಆಗ ಸಮಧಾನ ಮಾಡಿದ್ದು ಇದೇ ವಿಶ್ವನಾಥ. ನಿಮ್ಮ ಜೊತೆ ಈಗ ಗನ್ ಮ್ಯಾನ್ ಗಳು ಇರಬಹುದು. ಹಿಂದುರಿಗಿ ನೋಡಿ ಆಗ ನಿಮ್ಮ ಜೊತೆ ಗನ್ ಮ್ಯಾನ್ ತರಹ ಇದೇ ವಿಶ್ವನಾಥ ತಿರುಗಿದ್ದು. ಅಲ್ಲದೆ ನೀವು ನೀಡಿರುವ ಹಲವು ಭಾಗ್ಯಗಳ ಹಿಂದೆ ಇದೇ ವಿಶ್ವನಾಥ ಮತ್ತು ರಮೇಶಕುಮಾರ ಇದ್ದಾರೆ ಅನ್ನೋದು ಈಗ ನಿಮಗೆ ನೆನಪಿಲ್ಲವೆನಿಸುತ್ತದೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು.
ನಿಮಗೆ ಸಹಾಯ ಮಾಡಿದವರನ್ನು ಎಂದಾದರೂ ನೆನಪಿಸಿಕೊಂಡಿದ್ದೀರಾ..? ಒಂಚೂರು ಕೃತಜ್ಞತೆ ಇಲ್ಲದವರು ನೀವು. ಅಂದು ಕಾಂಗ್ರೆಸ್‍ನಲ್ಲಿ ನಿಮ್ಮನ್ನು ಹೇಗೆ ನೋಡಿಕೊಂಡಿದ್ದೀವಿ ಎಂಬುದು ನೆನಪಿಸಿಕೊಳ್ಳಿ ಎಂದು ಸಿದ್ಧರಾಮಯ್ಯ ವಿರುದ್ಧ ಹೆಚ್.ವಿಶ್ವನಾಥ ತೀವ್ರ ವಾಗ್ದಾಳಿ ನಡೆಸಿದರು.