ಯಾದಗಿರಿ ಪೌರಾಯುಕ್ತರು ಪೊಲೀಸ್ ಭದ್ರತೆಯೊಂದಿಗೆ ಡ್ಯೂಟಿ ಮಾಡ್ತಿರೋದೇಕೆ..?
ನಿಯಮ ಬಾಹಿರ ಟೆಂಡರ್ ರದ್ದುಗೊಳಿಸಿರುವುದೇ ತಪ್ಪಾ..?
ಯಾದಗಿರಿಃ 2017-18 ನೇ ಸಾಲಿನ 14 ನೇ ಹಣಕಾಸು ಯೋಜನೆಯಡಿ ಹಾಗೂ ಎಸ್‍ಎಫ್‍ಸಿ ಮುಕ್ತ ನಿಧಿ ಸೇರಿದಂತೆ 8 ಪ್ಯಾಕೇಜ್ ಕಾಮಗಾರಿಗಳಿಗೆ ಕರೆದಿದ್ದ ಒಟ್ಟು 1.75 ಕೋಟಿ ರೂ.ಟೆಂಡರ್ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ, ಇಲ್ಲಿನ ನಗರಸಭೆ ಪೌರಾಯುಕ್ತ ಸಂಗಮೇಶ ಉಪಾಸೆಯವರಿಗೆ ಜೀವ ಭಯವಿರುವ ಕಾರಣ, ಆತಂಕಗೊಂಡ ಅವರು, ಪೊಲೀಸರ ರಕ್ಷಣೆಗೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಪೊಲೀಸರ ರಕ್ಷಣೆಯಲ್ಲಿ ಅವರು ಬುಧವಾರ ಕರ್ತವ್ಯ ನಿಭಾಯಿಸುತ್ತಿರುವುದು ಕಂಡು ಬಂದಿತು.
ಕಳೆದ ತಿಂಗಳು ನೂತನವಾಗಿ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಉಪಾಸೆ ಅವರು, ಕಚೇರಿಯಲ್ಲಿ ದಾಖಲೆ ಪರಿಶೀಲನೆ ವೇಳೆ ಬೃಹತ್ ಮೊತ್ತದ ಟೆಂಡರ್‍ನಲ್ಲಿ ಅಕ್ರಮ ವಾಸನೆ ಬೀರಿದೆ. ಸಮರ್ಪಕವಾಗಿ ದಾಖಲೆ ಪರಿಶೀಲಿಸಿದ ನಂತರ ನಿಯಮ ಉಲ್ಲಂಘಿಸಿ ಟೆಂಡರ್ ಕರೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅವರು, ಈ ಟೆಂಡರ್‍ನ್ನು ಯಾರ ಅನುಮತಿಗೂ ಕಾಯದೆ ರದ್ದುಗೊಳಿಸಿದ್ದರು.
ಹೀಗಾಗಿ ಕಚೇರಿ ಕೆಲ ಭ್ರಷ್ಟ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳ ನಡುವೆ ಶೀತಲ ಸಮರ ನಡೆದಿತ್ತು ಎನ್ನಲಾಗಿದೆ. ಪ್ರಸ್ತುತ ಉಪಾಸೆ ಅವರು, ಭ್ರಷ್ಟಾಚಾರಿಗಳಿಗೆ ಪೆಟ್ಟು ನೀಡಲು ತಯಾರು ಆಗಿರುವುದರಿಂದ ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನಲಾಗಿದೆ. ಅವರ ಪ್ರಾಮಾಣಿಕತೆ ಅಣುಕಿಸುವ ಕೆಲವು ಕುಹಕಿಗಳು ಅವರಲ್ಲಿ ಭಯ ಉಂಟು ಮಾಡುವ ಕೆಲಸ ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ.
ಈ ನಡುವೆ ಕಚೇರಿಯಲ್ಲಿ ನಿತ್ಯ ಕಿರಿಕಿರಿಗೆ ಬೇಸತ್ತ ಉಪಾಸೆಯವರು ಪೊಲೀಸರಿಗೆ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ನಗರಸಭೆ ಕಚೇರಿಗೆ ಮತ್ತು ಪೌರಾಯುಕ್ತರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಿರುವುದು ಕಂಡು ಬರುತ್ತಿದೆ.
ನಿತ್ಯ ಹಲವಾರು ಘಟನೆಃ ಕರ್ತವ್ಯ ನಿಭಾಯಿಸಲು ಅಡ್ಡಿಃ ಪೌರಾಯುಕ್ತ ಉಪಾಸೆ
![](http://vinayavani.com/wp-content/uploads/2017/09/IMG_20170920_185853-232x300.jpg)
ಟೆಂಡರ್ ನಿಯಮ ಉಲ್ಲಂಘನೆ ಸೇರಿದಂತೆ ಹಲವಾರು ಕೆಲಸಗಳಿಗೆ ನಿತ್ಯ ಕಿರಿಕಿರಿ ಸಾಕಾಗಿತ್ತು. ಹೀಗಾಗಿ ನಮ್ಮ ಕರ್ತವ್ಯ ನಿಭಾಯಿಸಲು ಅಡ್ಡಿಯಾಗಿತ್ತು. ಯಾವುದೆ ಕಾರಣಕ್ಕೆ ಭ್ರಷ್ಟತೆಗೆ ಆಧ್ಯತೆ ನೀಡುವದಿಲ್ಲ. ಸಮರ್ಪಕ ಯೋಜನೆಗಳು ನಿಯಮನುಸಾರ ನಡೆಯಬೇಕು. ಅದರಿಂದ ಪ್ರಗತಿ ಸಾಧ್ಯವಿದೆ. ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸರಿ ಯಾವುದು ತಪ್ಪು ಯಾವುದು ಎಂಬುದನ್ನು ಅರಿಯಬೇಕು. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಭದ್ರತೆ ಅಗತ್ಯವೆನಿಸಿತು.
V good
Thank u