ಪ್ರಮುಖ ಸುದ್ದಿ
‘ಲಿಂಗಾಯತ ಧರ್ಮ’ ಪ್ರಸ್ತಾವನೆ ಪರಾಮರ್ಶೆ ಸಮಿತಿಯಲ್ಲಿ ಯಾರಿದ್ದಾರೆ ನೋಡಿ!
ಬೆಂಗಳೂರು: ಸುಮಾರು ತಿಂಗಳುಗಳಿಂದ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ವಾದ ವಿವಾದಗಳು ಜೋರಾಗಿವೆ. ಲಿಂಗಾಯತ ಸಮಾವೇಶಗಳು ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಿವೆ. ಈಗಾಗಲೇ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ನೀಡುವಂತೆ ಮನವಿ ಮಾಡಿರುವ ಪತ್ರಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕೈಸೇರಿವೆ. ಹೀಗಾಗಿ, ನಾಲ್ಕು ವಾರಗಳಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸರ್ಕಾರ ತಜ್ಞರ ಸಮಿತಿ ರಚಿಸಿದೆ.
ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಬೆಳಗಾವಿಯ ಉಪನ್ಯಾಸಕ ಡಾ.ರಾಮಕೃಷ್ಣ ಮರಾಠೆ, ಪತ್ರಕರ್ತ ಡಾ.ಸರಜೂ ಕಾಟ್ಕರ್, ಮೈಸೂರಿನ ಪ್ರಾಧ್ಯಾಪಕ ಡಾ. ಮುಜಾಫರ್ ಅಸ್ಸಾದಿ, ದೆಹಲಿ ಕನ್ನಡ ಪೀಠದ ಮುಖ್ಯಸ್ಥ ಡಾ.ಪುರುಷೋತ್ತಮ ಬಿಳಿಮಲೆ, ಹಿಂದುಳಿದ ಆಯೋಗದ ಮಾಜಿ ಅದ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ ಅವರು ಸಮಿತಿಯಲ್ಲಿದ್ದಾರೆ.