ಜನಮನ

ಗುಡಿಗಳತ್ತ ರಾಹುಲ್ ಗಾಂಧಿ : ಗುಡಿಸಲುಗಳತ್ತ ಬಿಜೆಪಿ ಮಂದಿ

-ಮಲ್ಲಿಕಾರ್ಜುನ ಮುದನೂರ್

ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ನಾಲ್ಕು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ರೆಡ್ಡಿ, ಶ್ರೀರಾಮುಲು ಕೋಟೆಯಾದ ಬಳ್ಳಾರಿಯ ಹೊಸಪೇಟೆಯಲ್ಲಿ ಭರ್ಜರಿ ಸಮಾವೇಶದಲ್ಲಿ ಭಾಗಿಯಾಗುವ ಮೂಲಕ ಹುಮ್ಮಸ್ಸಿನಲ್ಲೇ ರಾಜ್ಯ ಸುತ್ತುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಟೆಂಪಲ್ ರನ್ ಮುಂದುವರೆಸಿದ್ದಾರೆ. ನಿನ್ನೆ ಕೊಪ್ಪಳದಲ್ಲಿ ಹುಲಿಗೆಮ್ಮ ದೇಗುಲ, ಗವಿಮಠಕ್ಕೆ ಭೇಟಿ ನೀಡಿದ್ದಾರೆ. ಇಂದು ಕನಕಾಚಲಪತಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಮಠ, ಮಂದಿರಗಳ ಭೇಟಿ ಮೂಲಕ ಮೃದು ಹಿಂದುತ್ವ ಪಾಲಿಸುವುದು. ಕೇಸರಿ ಪಡೆಯ ಹಿಂದುತ್ವದ ಅಸ್ತ್ರವನ್ನು ಬುಡಮೇಲು ಮಾಡುವುದು ರಾಹುಲ್ ಪ್ಲಾನ್. ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಮಠಗಳಿಗೆ ಭೇಟಿ ನೀಡಿ ಮಠಾಧೀಶರ ಜೊತೆ ಸಮಾಲೋಚನೆ ನಡೆಸುವುದು. ಆ ಮೂಲಕ ಬಿಜೆಪಿ ವೋಟ್ ಬ್ಯಾಂಕ್ ಎಂದೇ ಪರಿಗಣಿಸಲ್ಪಡುವ ಲಿಂಗಾಯತ ಸಮುದಾಯದ ಮತಬುಟ್ಟಿಗೆ ಕೈ ಹಾಕುವ ತಂತ್ರಗಾರಿಕೆ ಕೈ ಪಡೆಯದ್ದಾಗಿದೆ.

ಮತ್ತೊಂದು ಕಡೆ ಕಮಲ ಪಡೆ ಕಾಂಗ್ರೆಸ್ ನಾಯಕರ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದೆ. ರಾಜ್ಯದಾದ್ಯಂತ ಕಮಲ ನಾಯಕರು ಸ್ಲಂಗಳಲ್ಲಿ ವಾಸ್ತವ್ಯ ಹೂಡುವುದು. ಸ್ಲಂಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿ ವರದಿ ಬಿಡುಗಡೆ ಮಾಡುವುದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸ್ಲಂಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅಭಿವೃದ್ಧಿ ಪಡಿಸುತ್ತೇವೆಂಬ ಭರವಸೆ ನೀಡುವುದು. ಆ ಮೂಲಕ ಕಾಂಗ್ರೆಸ್ ಮತಬ್ಯಾಂಕ್ ಎಂದೇ ಪರಿಗಣಿಸಲ್ಪಡುವ ಹಿಂದುಳಿದ, ದಲಿತ, ಶೋಷಿತರ ಮತಗಳನ್ನು ಕಮಲದತ್ತ ಸೆಳೆಯುವುದು ಕೇಸರಿ ಬ್ರಿಗೇಡ್ ನ ಪ್ಲಾನ್.

ಮಾಜಿ ಮುಖ್ಯಮಂತ್ರಿ  ಹಾಗೂ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನ ಸ್ಲಂನಲ್ಲಿ ವಾಸ್ತವ್ಯ ಹೂಡುವ ಮೂಲಕ ಸ್ಲಂ ಮತಗಳ ಮೇಲೆ ಕಣ್ಣು ಹಾಕಿದ್ದಾರೆ. ರಾಜ್ಯದಾದ್ಯಂತ ವಿವಿದೆಡೆ ಕಮಲ ನಾಯಕರು ಸ್ಲಂಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ರಾಹುಲ್ ಗಾಂಧಿ ಮಠ, ಮಂದಿರಗಳಿಗೆ ಭೇಟಿ ನೀಡಿ ರಾಜ್ಯ ಪ್ರವಾಸ ಮಾಡುತ್ತಿರುವ ವೇಳೆಯೇ ಸ್ಲಂ ಪಾಲಿಟಿಕ್ಸ್ ಮೂಲಕ ಕಮಲ ಪಾಳೇಯ ಬಡವರ ಪರವಿದೆ ಎಂಬ ಸಂದೇಶ ಸಾರಲು ಮುಂದಾಗಿದೆ.

ಒಟ್ಟಾರೆಯಾಗಿ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿವೆ. ಆದರೆ, ಈ ಸಲದ ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷದ ಸಿದ್ಧಾಂತಗಳಿಗೂ ರಾಜಕೀಯ ನಡೆಗೂ ಸಂಬಂಧವಿಲ್ಲದಂತೆ ಎಲ್ಲವೂ ‘ಉಲ್ಟಾ ಪಲ್ಟಾ’ ಗೋಚರಿಸುತ್ತಿದೆ. ಯಾವ ಪಕ್ಷ, ಯಾವ ಸಮಯದಲ್ಲಿ , ಏನು ಗಿಮಿಕ್ ಮಾಡುತ್ತದೆ ಎಂಬುದು ಯಾರಿಗೂ ತಿಳಿಯದಂತಾಗಿದೆ. ರಾಜ್ಯದ ಜನ ರಾಜಕೀಯ ನಾಯಕರ ಗಿಮಿಕ್ ಕಂಡು ನಿಜಕ್ಕೂ ಅಚ್ಚರಿಗೊಳಗಾಗಿದ್ದಾರೆ.

ಕೈ ಪಡೆಯೇ ಆಗಲಿ, ಕಮಲ ಪಡೆಯೇ ಆಗಲಿ ಏನೇ ಗಿಮಿಕ್ ಮಾಡಲಿ. ಜನರಿಗೆ ಒಳಿತಾಗುವ ಯೋಜನೆಗಳನ್ನು ರೂಪಿಸಲಿ. ಚುನಾವಣಾ ಪೂರ್ವದಲ್ಲಿ ತೋರುವ ಜನಪರ ಕಾಳಜಿ ಅಧಿಕಾರ ಹಿಡಿದಾಗ ಬದ್ಧತೆಯಿಂದ ಪ್ರದರ್ಶಿಸಲಿ. ಆ ಮೂಲಕ ತಮ್ಮದು ನಿಜವಾದ ಜನಪರ ಪಕ್ಷ, ತಾವು ಸಮಾಜಮುಖಿ ನಾಯಕರು ಎಂಬುದನ್ನು ತೋರಲಿ ಅನ್ನೋದು ಪ್ರಗ್ನಾವಂತರ ಅಭಿಪ್ರಾಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button