ಸಿಎಂ ಸಿದ್ಧರಾಮಯ್ಯ ಮತಕ್ಷೇತ್ರದಲ್ಲಿ ಎದುರಾಳಿ ಯಾರು ಗೊತ್ತಾ?
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರತಿನಿಧಿಸುತ್ತಿರುವ ಮೈಸೂರು ಜಿಲ್ಲೆಯ ವರುಣ ಮತಕ್ಷೇತ್ರವನ್ನು ಬರುವ ಚುನಾವಣೆಗೆ ತಮ್ಮ ಪುತ್ರ ಡಾ.ಯತೀಂದ್ರ ಗೆ ಬಿಟ್ಟು ಕೊಡಲಿದ್ದಾರೆ. ಸಿಎಂ ಸಿದ್ಧರಾಮಯ್ಯ ಮರಳಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬುದು ಈಗ ಹಳೇ ಸುದ್ದಿ. ಆದ್ರೆ, ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದರೆ ಜೆಡಿಎಸ್ ನಿಂದ ಅವರ ಪ್ರತಿಸ್ಪರ್ಧಿ ಯಾರಾಗಲಿದ್ದಾರೆಂಬುದು ಈಗ ಹೊಸ ಸಂಚಲನವನ್ನು ಮೂಡಿಸಿದೆ. ಹೌದು, ಒಂದು ಕಾಲದಲ್ಲಿ ಸಿದ್ಧರಾಮಯ್ಯ ಅವರಿಗೆ ಆಪ್ತರಾಗಿದ್ದ ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಅವರೇ ಸಿದ್ಧರಾಮಯ್ಯ ಅವರ ಪುತ್ರನ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಇಂದು ಮಾಜಿ ಪ್ರಧಾನಿ , ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರನ್ನು ಇಂದು ಭೇಟಿ ಮಾಡಿದ್ದಾರೆ. ಪಿ.ಜಿ.ಆರ್ ಸಿಂಧ್ಯಾ ಮರಳಿ ಜೆಡಿಎಸ್ ಸೇರಲು ವೇದಿಕೆ ಸಿದ್ಧವಾಗಿದೆ. ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರನ ವಿರುದ್ಧ ಸ್ಪರ್ದೆಗೆ ಸಿದ್ಧವಾಗುವಂತೆ ದೇವೇಗೌಡರು ಸೂಚಿಸಿದ್ದಾರೆ ಎಂದು ಜೆಡಿಎಸ್ ನ ಖಚಿತ ಮೂಲಗಳಿಂದ ತಿಳಿದು ಬಂದಿದೆ. ಆ ಮೂಲಕ ಸಿದ್ಧರಾಮಯ್ಯ ಅವರು ತಮ್ಮ ಪುತ್ರನನ್ನು ರಾಜಕೀಯ ಕ್ಷೇತ್ರಕ್ಕೆ ತರುವ ಪ್ರಯತ್ನಕ್ಕೆ ಕಡಿವಾಣ ಹಾಕಲು ದೇವೇಗೌಡರು ದೊಡ್ಡ ದಾಳ ಉರುಳಿಸಿದ್ದಾರೆಂದೇ ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಸಿಎಂ ಸಿದ್ಧರಾಮಯ್ಯ ಯಾವ ಪ್ರತಿತಂತ್ರ ಹೂಡಲಿದ್ದಾರೆ. ವರುಣಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.