ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರಾರು.? ಹಂಗಾಮಿಯಲ್ಲೇ ಸೋನಿಯಾ ಮುಂದುವರೆಯಲಿದ್ದಾರೆಯೇ.?
ನವದೆಹಲಿಃ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತೆ ಸೋನಿಯಾ ಗಾಂಧಿ ಅವರೇ ಅಧಿಕೃತವಾಗಿ ಆಯ್ಕೆಯಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಇಲ್ಲವಾದಲ್ಲಿ ಹಂಗಾಮಿ ಅಧ್ಯಕ್ಷರಾಗಿಯೇ ಮುಂದುವರೆಸಬೇಕೇ.? ಎಂಬ ಗೊಂದಲವು ಸಹ ಕಾಂಗ್ರೆಸ್ ನಲ್ಲಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಇದೇ ಆಗಸ್ಟ್ 10 ಕ್ಕೆ ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷೆಯಾಗಿ ಸೋನಿಯಾ ಅವರು ಒಂದು ವರ್ಷ ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿಯವರನ್ನೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯದಲ್ಲಿಯೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿ.ಡಬ್ಲ್ಯೂ.ಸಿ.) ಸಭೆ ಸೇರಲಿದ್ದು, ಈ ಕುರಿತು ನಿರ್ಧಾರಕೈಗೊಳ್ಳುವ ಸಂಭವವಿದೆ ಎಂದು ತಿಳಿದು ಬಂದಿದೆ.
ಪೂರ್ಣಾವಧಿ ಅಧ್ಯಕ್ಷರನ್ನು ಇದುವರೆಗೂ ನೇಮಕ ಮಾಡದಿರುವದರಿಂದ ಅವಧಿ ವಿಸ್ತರಿಸುವದು ಅಗತ್ಯವಿದೆ ಎಂದು ಪಕ್ಷದ ಪ್ರಮುಖ ನಾಯಕರೊಬ್ಬರು ಹೇಳಿದ್ದಾರೆ ಎನ್ನಲಾಗುತ್ತಿದೆ.
ಅಲ್ಲದೆ ಈ ಕುರಿತು ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಬೇಕಾಗುತ್ತದೆ ಎಂದು ಸಹ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪರಾಭಾವ ಹೊಂದಿರುವ ಹಿನ್ನೆಲೆ ಅಂದಿನ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಗಸ್ಟ್ 10 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿಯವರನ್ನು ನೇಮಿಸಲಾಗಿತ್ತು.