ಕೊನೆ ಗಳಿಗೆಯಲ್ಲೇ ಕೊಡ್ತಾರೆ ಕಾಂಗ್ರೆಸ್ ಟಿಕೆಟ್- ಹೆಚ್.ಆಂಜನೇಯ
ಚಿತ್ರದುರ್ಗ: ಕರ್ನಾಟಕದಲ್ಲಿ ಚುನಾವಣೆ ಕಾವು ಜೋರಾಗಿದೆ. ಈಸಲದ ಚುನಾವಣೆ ಭಾರೀ ಜಿದ್ದಾಜಿದ್ದಿನಿಂದ ಕೂಡಿದೆ. ದೇಶ ಗೆಲ್ಲುತ್ತ ಹೊರಟ ಬಿಜೆಪಿ ಶತಾಯಗತಾಯ ಕರ್ನಾಟಕ ಗೆಲ್ಲಲೇ ಬೇಕೆಂದು ಹೊರಟಿದೆ. ಇನ್ನು ಕಾಂಗ್ರೆಸ್ಸಿಗೆ ಕರ್ನಾಟಕ ಗೆಲ್ಲುವುದು ಅಳಿವು ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ, ಎರಡೂ ರಾಷ್ಟ್ರೀಯ ಪಕ್ಷದ ನಾಯಕರು ತಮ್ಮದೇ ಆದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಜೆಡಿಎಸ್ ಕೂಡ ನಾನೇನು ಕಮ್ಮಿಯಿಲ್ಲ ಅಂತ ಈಗಾಗಲೇ ಅಖಾಡಕ್ಕೆ ಇಳಿದಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವ ಕೊನೆ ಗಳಿಗೆಯಲ್ಲೇ ಟಿಕೆಟ್ ನೀಡುವುದು. ಅಥವಾ ನಾಮಪತ್ರ ಸಲ್ಲಿಸುವ ನಾಲ್ಕು ದಿನ ಮೊದಲು ಅಬ್ಯರ್ಥಿಗಳನ್ನು ಘೋಷಿಸಬಹುದು. ಈ ಮೊದಲೇ ಅಬ್ಯರ್ಥಿಗಳನ್ನು ಘೋಷಿಸುವ ಸಂಪ್ರದಾಯವಾಗಲಿ, ಪ್ರಕ್ರಿಯೆಯಾಗಲಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಗುಜರಾತಿನಲ್ಲೂ ಸಹ ಕಾಂಗ್ರೆಸ್ ಮೊದಲೇ ಅಬ್ಯರ್ಥಿಗಳನ್ನು ಘೋಷಿಸಲಿಲ್ಲ ಎಂದು ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ಸಚಿವ ಹೆಚ್.ಆಂಜನೇಯ ಅವರ ಈ ಹೇಳಿಕೆ ಕಾಂಗ್ರೆಸ್ ಪಕ್ಷ ಎಂದಿನಂತೆ ಟಿಕೆಟ್ ನೀಡುವ ವಿಚಾರದಲ್ಲಿ ಲೇಟ್ ಲತೀಫ್ ಆಗಲಿದೆ ಎಂಬ ಮುನ್ಸೂಚನೆಯಾಗಿದೆ. ಕೊನೆ ಗಳಿಗೆಯಲ್ಲಿ ಟಿಕೆಟ್ ವಿತರಿಸುವ ತಂತ್ರಗಾರಿಕೆಯನ್ನೇ ಕಾಂಗ್ರೆಸ್ ಈ ಬಾರಿಯೂ ಮುಂದುವರೆಸುವ ಸಾಧ್ಯತೆ ಇದೆ. ಹೀಗಾಗಿ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಯಾವ ಪ್ರತಿ ತಂತ್ರವನ್ನು ಹೂಡಲಿವೆ. ತಮ್ಮ ಪಕ್ಷದ ಅಬ್ಯರ್ಥಿಗಳನ್ನು ಯಾವ ಸಮಯದಲ್ಲಿ ಘೋಷಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ.