ಕಾಂಗ್ರೆಸ್ ಪಕ್ಷದಲ್ಲಿ ಚಮಚಾಗಿರಿಗೆ ಬೆಲೆಯಿದೆ – ಮಾಲೀಕಯ್ಯ ಗುತ್ತೇದಾರ ಕಿಡಿಕಿಡಿ
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಯಾರು ಕಾರಿನ ಡೋರ್ ತೆಗೆಯುತ್ತಾರೆ. ನಾಯಕರಿಗೆ ಚಮಚಾಗಿರಿ ಮಾಡುತ್ತಾರೋ ಅಂಥವರಿಗೆ ಬೆಲೆ ಇದೆ. ನಮ್ಮಂಥವರನ್ನು ಮೂಲೆಗುಂಪು ಮಾಡಲಾಗುತ್ತದೆ. ಮಂತ್ರಿ ಆಗುವ ಎಲ್ಲಾ ಅರ್ಹತೆ ಇದ್ದರೂ ನಮಗೆ ಬೆಲೆ ಕೊಡಲಿಲ್ಲ. ಪಕ್ಷದಲ್ಲೂ ಯಾವುದೇ ಉನ್ನತ ಹುದ್ದೆ ನೀಡಲಿಲ್ಲ ಎಂದು ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ಬಳಿಕ ಶಾಸಕ ಗುತ್ತೇದಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕೊಟ್ಟ ಮಾತಿನಂತೆ ಅವರ ಅಧಿಕಾರ ಅವಧಿಯವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಉಳಿದುಕೊಂಡಿದ್ದೆನು. ಈಗ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶೋದ್ಧಾರದ ಕೆಲಸ ಮಾಡುತ್ತಿದೆ. ಹೀಗಾಗಿ, ಬೇಷರತ್ತಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದು ತಿಳಿಸಿದರು.
ಇಂದು ವಿಧಾನಸಭೆ ಸ್ಪೀಕರ್ ಕೋಳಿವಾಡ್ ಬೆಂಗಳೂರಿನಲ್ಲಿ ಇಲ್ಲ. ಹೀಗಾಗಿ, ಎರಡು ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಮೈಸೂರಿನಲ್ಲಿ ಬಿಜೆಪಿ ಸೇರುತ್ತೇನೆ ಎಂದರು. ಇದೇ ವೇಳೆ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಕಿಡಿಕಾರಿದ ಮಾಲೀಕಯ್ಯ ಗುತ್ತೇದಾರ್ , ಪ್ರಿಯಾಂಕ ಖರ್ಗೆ ಬಚ್ಚಾ ಎಂದರು. ಅಲ್ಲದೆ ಈಸಲ ಪ್ರಿಯಾಂಕ ಖರ್ಗೆ ಚಿತ್ತಾಪುರ ಕ್ಷೇತ್ರ ಅಥವಾ ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ದಿಸಿದರೂ ಸೋಲಿಸುತ್ತೇನೆ ಎಂದು ಕಿಡಿಕಾರಿದರು.