ಮಹರ್ಷಿ ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನ ಬಹುತೇಕ ನಾಯಕರು ಭಾಗಿ – ಬಿಜೆಪಿ ಆರೋಪ
ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ಸಿನ ಬಹುತೇಕ ನಾಯಕರು ಸೇರಿಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಗಂಭೀರ ಆರೋಪ ಮಾಡಿದೆ. ಜೊತೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.
ಬಿಜೆಪಿ ಎಕ್ಸ್ ಪೋಸ್ಟ್‌ಗಳಲ್ಲಿ ಏನಿದೆ?:
ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ಸಿನ ಬಹುತೇಕ ನಾಯಕರು ಸೇರಿಕೊಂಡು ಮಾಡಿರುವ ಮಹಾನ್ ಭ್ರಷ್ಟಾಚಾರವಾಗಿದೆ. ಈ ಪ್ರಕರಣದ 8ನೇ ಆರೋಪಿ, ಎಸ್ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲವೆಂದು ಹೇಳಿದ್ದು, ತನ್ನ ಮೊಬೈಲ್‌ನಲ್ಲಿ ನಿಗಮದ ಅಧ್ಯಕ್ಷರಾದ ಬಸವರಾಜ್ ದದ್ದಲ್ ಜೊತೆ ನಡೆಸಿರುವ ಸಂಭಾಷಣೆಯನ್ನು ಎಸ್ಐಟಿ ವಶಪಡಿಸಿಕೊಂಡಿದೆ. ಅದನ್ನು ನಾಶ ಮಾಡುವ ಸಂಭವವಿರುತ್ತದೆ. ಹಾಗಾಗಿ ಅದರ ಒಂದು ಪ್ರತಿಯನ್ನು ಕೋರ್ಟ್ ಪಡೆದುಕೊಳ್ಳಬೇಕೆಂದು ಹೇಳಿದ್ದಾನೆ. ಸಚಿವರಾದ ಶ್ರೀ ಶರಣ ಪ್ರಕಾಶ್ ಪಾಟೀಲ್ ಅವರ ಕಾರ್ಯಾಲಯದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಯೂನಿಯನ್ ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ನಾಶ ಮಾಡುವ ಸಂಭವವಿದ್ದು ಅವುಗಳನ್ನು ಕೂಡ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರ್ಟಿನಲ್ಲಿ ಮನವಿ ಮಾಡಿದ್ದಾನೆ. ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಭಾಗಿಯಾಗಿರುವ ಈ ಒಂದು ಹಗರಣವನ್ನು ಎಸ್ಐಟಿ ನಿಷ್ಪಕ್ಷಪಾತ ತನಿಖೆ ನಡೆಸುವುದು ಅಸಾಧ್ಯ, ಆದಕಾರಣ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಸಿಬಿಐಗೆ ವಹಿಸಿ ತಾವು ಕೂಡ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದೆ. ಮತ್ತೊಂಂದು ಪೋಸ್ಟ್ ನಲ್ಲಿ ತನ್ನ ಭ್ರಷ್ಟಾಚಾರದ ತಿಜೋರಿ ತುಂಬಿಸಲು ಕಾಂಗ್ರೆಸ್ ಗುತ್ತಿಗೆದಾರರನ್ನು ಗಾಳವಾಗಿ ಬಳಸಿಕೊಳ್ಳುತ್ತಿದೆ. ಸಿದ್ದರಾಮಯ್ಯನವರ ನಯವಂಚನೆಗೆ ಒಳಗಾಗಿ ನಂಬಿ ಕೆಟ್ಟ ಗುತ್ತಿಗೆದಾರರಿಗೆ ಈಗ ವಾಸ್ತವ ಅರಿವಾಗಿದೆ ನಿಜ. ಆದರೆ ಅಷ್ಟರಲ್ಲಾಗಲೇ ಕೈ ಕುತ್ತಿಗೆಗೆ ಬಂದಿದೆ. ಮೊದಲೇ ಹದಗೆಟ್ಟ ವ್ಯವಸ್ಥೆಯಲ್ಲಿ ಜೀವಕ್ಕೆ ಬೆಲೆ ಇದೆಯೇ ಎಂಬುದು ಜನಮಾನಸದಲ್ಲಿ ಇರುವ ಪ್ರಶ್ನೆ ಎಂದು ಹೇಳಿದೆ. ರಾಜ್ಯ ಕಂಡ ಅತಿ ಭ್ರಷ್ಟ ಸರ್ಕಾರವಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಲೆಕ್ಷನ್ ಕಲೆ ಮಿತಿಮೀರಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಜನ ಕಂದಾಯ ಇಲಾಖೆಗೆ ಕಟ್ಟುವ ಹಣವೆಲ್ಲಾ ಸಿಬ್ಬಂದಿಗಳ ಖಾಸಗಿ ಖಾತೆಗೆ ಜಮೆ ಆಗುತ್ತಿತ್ತು ಎಂದರೆ ಈ ಸರ್ಕಾರ ಅದಿನ್ನೆಂಥ ಭ್ರಷ್ಟ ಜಾಲವನ್ನು ಹೆಣೆದಿದೆ ಎಂಬುದು ಸ್ಪಷ್ಟವಾಗುತ್ತಿದೆ. ದೆಹಲಿಯಲ್ಲಿರುವ ಕಾಂಗ್ರೆಸ್‌ನ ಕಲೆಕ್ಷನ್ ಏಜೆಂಟರು ಸದ್ಯದಲ್ಲೇ ನಮ್ಮ ರಾಜ್ಯಕ್ಕೆ ಮತ್ತೆ ಭೇಟಿ ನೀಡುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಅಭಿವೃದ್ಧಿ ನಿಗಮಗಳಿಂದ ಸಾವಿರ ಕೋಟಿ ರೂಪಾಯಿ ಖಾಸಗಿ ಬ್ಯಾಂಕ್‌ಗಳಿಗೆ ಜಮೆಯಾದಂತೆ ಕಂದಾಯ ಇಲಾಖೆಗೆ ಸಂದಾಯವಾದ ರಾಜಸ್ವವೇ ಗುಳುಂ ಆಗುತ್ತಿದೆಯಲ್ಲ ಮುಖ್ಯಮಂತ್ರಿಗಳೇ, ಇನ್ನೆಷ್ಟು ಚುನಾವಣೆಗಳಿಗೆ ಹಣ ಕಲೆಕ್ಷನ್ ಮಾಡುವ ಹೊಣೆ ಹೊತ್ತಿದ್ದೀರಿ? ಎಂದು ಪ್ರಶ್ನಿಸಿದೆ.