70 ಆಕ್ಸಿಜನ್ ಕಾನ್ಸೆಂಟ್ರೇಟರ್ ವಿತರಣೆ, ಎಚ್.ಎಫ್.ಎನ್.ಸಿ ಯಂತ್ರಗಳಿಗೆ ಚಾಲನೆ
ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಭೇಟಿ
ಯಾದಗಿರಿ: ಯಾದಗಿರಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ತೋಟಗಾರಿಕೆ ಮತ್ತು ರೇಷ್ಮೆ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಶಂಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಒಂದಕ್ಕೆ 3.5 ಲಕ್ಷ ರೂ ವೆಚ್ಚ ಬೆಲೆ ಬಾಳುವ 40 ಎಚ್.ಎಫ್.ಎನ್.ಸಿ ( ಹೈ ಫ್ಲೋ ನಾಸಲ್ ಕ್ಯಾನ್ಯುಲಾ) ಆಕ್ಸಿಜನ್ ನಿಯಂತ್ರಣ ಯಂತ್ರಗಳಿಗೆ ಸಚಿವರು ಈ ಸಂದರ್ಭದಲ್ಲಿ ಚಾಲನೆ ನೀಡಿದರು.
ಬೆಡ್‍ನ ಆಕ್ಸಿಜನ್ ಪೈಪ್‍ಲೈನ್ ಗೆ ಈ ಯಂತ್ರವನ್ನು ಅಳವಡಿಸಿದಲ್ಲಿ ಪೈಪ್‍ಲೈನ್ ಮೂಲಕ ಸರಬರಾಜಗುವ ಆಮ್ಲಜನಕವನ್ನು ರೋಗಿಗೆ ಅಗತ್ಯವಿರುವಷ್ಟು ಮಾತ್ರ (ಸಮಪ್ರಮಾಣ) ಪೂರೈಸುವ ಕೆಲಸವನ್ನು ಈ ಎಚ್.ಎಫ್.ಎನ್.ಸಿ ಯಂತ್ರ ಮಾಡುತ್ತದೆ ಎಂದ ಸಚಿವರು, ಈ ಯಂತ್ರಗಳನ್ನು ನೀಡಿದ ಅಜೀಂ ಪ್ರೇಮ್ ಜೀ ಫೌಂಡೇಶನ್ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್ ನಿಧಿಯಿಂದ ಜಿಲ್ಲಾಡಳಿತವು 70 ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳನ್ನು ಖರೀದಿ ಮಾಡಿದ್ದು, ಕೋವಿಡ್ ಸೋಂಕಿತರ ನೆರವಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 50 ಮತ್ತು ಜಿಲ್ಲಾ ಕೋವಿಡ್ ಆಸ್ಪತ್ರೆಗೆ 20 ಕಾನ್ಸಂಟ್ರೇಟರ್ ವಿತರಿಸಲಾಯಿತು.
ನಂತರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಿರುವ ಆಮ್ಲಜನಕ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಸ್ರೇಲ್ ದಾನವಾಗಿ ನೀಡಿರುವ ಭಾರೀ ಬೆಲೆಬಾಳುವ ಆಕ್ಸಿಜನ್ ಕಂಟೇನರ್, ಒಂದು ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ಸಚಿವರು ಇದರ ಕಾರ್ಯಕ್ಷಮತೆ ಬಗ್ಗೆ ತಂತ್ರಜ್ಞರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ, ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ, ಹಿರಿಯ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವ ಕುಮಾರ ರಾಯಚೂರಕರ್, ತಹಶೀಲ್ದಾರ ಚೆನ್ನಮಲ್ಲಪ್ಪ ಘಂಟಿ ಇನ್ನಿತರರು ಹಾಜರಿದ್ದರು.
ಸಸಿ ನೆಟ್ಟ ಸಚಿವರು: ಇದಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 2 ನೇ ಅವಧಿಯಲ್ಲಿ ಕೇಂದ್ರ ಸರ್ಕಾರ ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಸೇವಾಯಿ ಸಂಘಟನೆ ವತಿಯಿಂದ ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ತೋಟಗಾರಿಕೆ ಮತ್ತು ರೇμÉ್ಮ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಶಂಕರ್ . ಅವರು ಸಸಿನೆಟ್ಟು ನೀರೆರೆದರು.
ನಂತರ ಸಚಿವರು ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲಾ ಕಟ್ಟಡ ಕಾರ್ಮಿಕರು ಮತ್ತು ಇತರ ಕಾರ್ಮಿಕರಿಗೆ ದವಸ ಧಾನ್ಯಗಳ ಆಹಾರದ ಕಿಟ್ ಗಳನ್ನು ವಿತರಿಸಿದರು.