ಕೋವಿಡ್ ಅನುದಾನ ಅವ್ಯವಹಾರ ಸಿಪಿಐಎಂ ಆರೋಪ
ಕೋವಿಡ್ ಅನುದಾನ ದುರ್ಬಳಕೆ ತನಿಖೆಗೆ ಆಗ್ರಹ
yadgiri-ಶಹಾಪುರಃ ಕೊರೊನಾ ಮಹಾಮಾರಿ ತಡೆಗೆ ಕೇಂದ್ರ ಸರ್ಕಾರದಿಂದ ಅನುದಾನದ ಬಳಕೆಯಲ್ಲಿ ಅವ್ಯವಹಾರ ನಡೆದಿದ್ದು, ಕೂಡಲೇ ತನಿಖೆಕೈಗೊಳ್ಳಬೇಕೆಂದು ಸಿಪಿಐಎಂ ಆಗ್ರಹಿಸಿ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಕಳೆದ ಆರು ತಿಂಗಳಿಂದ ಮಹಾಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಸಮರ್ಪಕವಾಗಿ ನಿಯಂತ್ರಿಸಬೇಕಿದ್ದ ಸರ್ಕಾರ ಬಂದ ಅನುದಾನದಲ್ಲಿ ಸಾರ್ವಜನಿಕರ ರಕ್ಷಣೆ ಮತ್ತು ಮಹಾಮಾರಿ ತಡೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವದು ಬಿಟ್ಟು ಅನುದಾನದಲ್ಲಿ ದುಡ್ಡು ಕಬಳಿಸುವ ಯತ್ನ ನಡೆದಿದೆ ಎಂದು ಗಂಭೀರವಾಗಿ ಪ್ರತಿಭಟನಾಗಾರರು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಚನ್ನಪ್ಪ ಆನೇಗುಂದಿ, ಕೊರೊನಾ ತಡೆಗಟ್ಟುವಲ್ಲಿ ಲಾಕ್ ಡೌನ್ ಹಿನ್ನೆಲೆ ನಿರ್ವಹಣೆಗೆ ಮತ್ತು ಕ್ವಾರಂಟೈನ್ ವ್ಯವಸ್ಥೆಗೆ ಮತ್ತು ಪಿಪಿಇ ಸೆಟ್, ಐಸುಲೇಷನ್ ಕೇಂದ್ರ ನಿರ್ವಹಣೆ ಸೋಂಕಿತರಿಗೆ ಚಿಕಿತ್ಸಾ ವೆಚ್ಚ ಮತ್ತು ಸೋಂಕಿತರ ಶವ ಸಂಸ್ಕಾರ ಸೇರಿದಂತೆ, ಟೆಸ್ಟಿಂಗ್ ಖರ್ಚು ನೂರಾರು ಕೋಟಿ ಖರ್ಚು ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕಿದೆ ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯನವರು ಕೋವಿಡ್ ಅನುದಾನದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದು, ವಿಪಕ್ಷ ನಾಯಕನ ಹೇಳಿಕೆ ಸರ್ಕಾರ ಗಮನ ಹರಿಸುವ ಮೂಲಕ ಈ ಕುರಿತು ಸ್ಪಷ್ಟನೆ ನೀಡಲಿ ಎಂದು ಮನವಿ ಮಾಡಿದರು. ಸಿಎಂ ಯಡಿಯೂರಪ್ಪನವರು ಕೋವಿಡ್ ಅನುದಾನದಲ್ಲಿ ಆಯವುದೇ ಅಕ್ರಮ ನಡೆದಿಲ್ಲ. ಬೇಕಾದರೆ ವಿಪಕ್ಷ ನಾಯಕರು ವಿಧಾನಸೌಧದಲ್ಲಿ ಕುಳಿತುಕೊಳ್ಳಲಿ ಅಧಿಕಾರಿಗಳು ಎಲ್ಲಾ ಕಾಗದ ಪತ್ರಗಳನ್ನು ಒಪ್ಪಿಸಲಿದ್ದಾರೆ ಸ್ವತಹಃ ಅವರೇ ಪರಿಶೀಲನೆ ಮಾಡಲಿ. ತಪ್ಪು ಎಸಗಿರುವದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವದು ಎನ್ನುವ ದಾಟಿ ನೋಡಿದರೆ ಅಕ್ರಮ ವಾಸನೆ ಕಂಡು ಬರುತ್ತಿದೆ ಎಂದರು. ಕೂಡಲೇ ಸೋಂಕಿತರ ಚಿಕಿತ್ಸೆ ಜವಬ್ದಾರಿ ಸರ್ಕಾರವೇ ಹೊರಬೇಕು. ಲಾಕ್ ಡೌನ್‍ನಿಂದ ಆರ್ಥಿಕವಾಗಿ ಕೆಸವಿಲ್ಲದೆ ನರಳುತ್ತಿರುವ ಬಡ ಕುಟುಂಬಗಳಿಗೆ ಸಹಾಯಧನ ವಿತರಿಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ದಾವಲ್‍ಸಾಬ ನದಾಫ್, ಮುಖಂಡರಾದ ಎಸ್.ಎಂ.ಸಾಗರ, ಮಲ್ಲಯ್ಯ ಪೋಲಂಪಲ್ಲಿ ಇತರರಿದ್ದರು.