ಬೆಳೆಗಳಿಗೆ ಬಲೆ ಕಟ್ಟುವ ಕೀಟದ ಹಾವಳಿ ನಿವಾರಣೆಗೆ ಸಲಹೆ
ತೊಗರಿ ಬೆಳೆಗೆ ಕಾಡುವ ಕೀಟ ಬಾಧೆ ನಿವಾರಣೆಗೆ ತಜ್ಞರ ಸಲಹೆ
ತೊಗರಿ ಬೆಳೆಯಲ್ಲಿ ಬಲೆ ಕಟ್ಟುವ ಕೀಟದ ಹಾವಳಿ
ಯಾದಗಿರಿ, ಶಹಾಪುರ: ಕಲಬುರ್ಗಿ ವಿಭಾಗ ತೊಗರಿ ಬೆಳೆಯ ಕಣಜವೆಂದೆ ಖ್ಯಾತಿ ಪಡೆದಿದೆ. ಈ ಭಾಗದಲ್ಲಿ ಅತಿ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತದೆ. ಹೀಗಾಗಿ ತೊಗರಿ ಬೆಳೆಗೆ ಬರುವ ವಿವಿಧ ಕೀಟಗಳ ಬಾಧೆ ನಿವಾರಣೆಗೆ ರೈತರು ಸಾಕಷ್ಟು ಶ್ರಮವಹಿಸುವದು ಇಲ್ಲಿ ಕಾಣಬಹುದು.
ತೊಗರಿ ಬೆಳೆಗೆ ಬಲೆ ಕಟ್ಟುವ ಕೀಟದ ಹಾವಳಿಯಿಂದ ಇಲ್ಲಿನ ತೊಗರಿ ಬೆಳೆಗಾರರು ಸಾಕಷ್ಟು ಬೇಸತ್ತು ಹೋಗಿದ್ದಾರೆ. ಆ ಕೀಟ ಕೇವಲ ತೊಗರಿ ಬೆಳೆ ಅಷ್ಟೆ ಅಲ್ಲದೆ ದ್ವಿದಳ ಧಾನ್ಯಗಳಾದ ಕಡಲೆ, ಅಲಸಂದಿ, ಉದ್ದು ಈ ಬೆಳೆಗಳಿಗೂ ಇದೇ ಕೀಟ ಬಾಧೆ ಉಂಟು ಮಾಡುತ್ತಿದೆ.
ತೊಗರಿ ಬೆಳೆಗಾರರ ಬೇಡಿಕೆ ಅನುಸಾರ ತಾಲೂಕಿನ ಸಿಂಗನಳ್ಳಿ ಗ್ರಾಮದ ರೈತ ಗುರುನಾಥರಡ್ಡಿ ಹೊಸಮನಿ ಹೊಲಕ್ಕೆ ಭೀಮರಾಯನ ಗುಡಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಮತ್ತು ಕೃಷಿ ವಿಜ್ಞಾನಿ ಎ.ಎಂ.ಬೆಂಕಿ ಭೇಟಿ ನೀಡಿ ತೊಗರಿ ಬೆಳೆಗೆ ಬಂದಿರುವ ರೋಗಬಾಧೆ ಕುರಿತು ಪರಿಶೀಲಿಸಿದರು.
ಈ ಕೀಟ ಬಾಧೆಯು ತೊಗರಿ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಕಂಡು ಬರುತ್ತದೆ. ತೊಗರಿಯನ್ನಲ್ಲದೆ ಇನ್ನಿತರ ದ್ವಿದಳ ಧಾನ್ಯಗಳಾದ ಕಡಲೆ, ಅಲಸಂದಿ, ಉದ್ದನ್ನು ಕೂಡ ಈ ಕೀಟ ಬಾಧಿಸುತ್ತದೆ ಎಂದು ವಿವರಿಸಿದ ಅವರು, ಈ ಕೀಟದ ಹಾವಳಿಯು ಬೆಳೆ ಹೂವಾಡುವ ಹಂತಕ್ಕೂ ಮೊದಲೇ ಕಂಡು ಬರುತ್ತದೆ. ಈ ಪತಂಗವು ಕಂದು ಬಣ್ಣದಾಗಿದ್ದು, ಮುಂಬದಿಯ ರೆಕ್ಕೆಗಳ ಮೇಲೆ ನಾಲ್ಕು ಕಪ್ಪು ಚುಕ್ಕೆಗಳು ಮತ್ತು ಮಿಂಚುವ ಬೆಳ್ಳಿ ಬಣ್ಣದ ಗುರುತುಗಳನ್ನು ಕಾಣಬಹುದು.
ಈ ಪತಂಗದ ಮರಿ ಹುಳಗಳು ತುದಿಯ 3-4 ಎಲೆಗಳು, ಹೂ- ಮೊಗ್ಗು ಕೂಡಿಸಿ ಬಲೆಯನ್ನು ಕಟ್ಟುತ್ತದೆ. ನಂತರ ಬಲೆಯೊಳಗೆ ಇದ್ದು ತಿನ್ನುವುದರಿಂದ ಇಳುವರಿ ಕಡಿಮೆ ಆಗುತ್ತದೆ. ಇಂತಹ ಕೀಟಗಳು ಕಂಡು ಬಂದಲ್ಲಿ 2.0 ಮಿ.ಲೀ. ಪ್ರೋಫೆನೋಫಾಸ್ 50 ಇ.ಸಿ. ಹಾಗೂ 0.5 ಮಿ.ಲೀ. ಡಿ.ಡಿ.ವಿ.ಪಿ 76 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವದರಿಂದ ಈ ಬಲೆ ಕಟ್ಟುವ ಬಾಧೆಯಿಂದ ಹೊರ ಬರಬಹುದು. ಬೆಳೆ ಉತ್ತಮವಾಗಿ ಬರಲಿದೆ ಎಂದು ಸಲಹೆ ನೀಡಿದರು.