ಸಲಾದಪುರ ಬ್ಯಾರೇಜ್ ನಿರ್ಮಾಣಕ್ಕೆ ಶಾಸಕ ದರ್ಶನಾಪುರ ಚಾಲನೆ
ಬ್ಯಾರೇಜ್‍ದಿಂದ ಅಂತರ್ಜಲ ಹೆಚ್ಚಳ-ಶಾಸಕ ದರ್ಶನಾಪುರ
ಶಹಾಪುರಃ ಬ್ಯಾರೇಜ್ ನಿರ್ಮಾಣದಿಂದ ಅಂತರ್ಜಲ ಹೆಚ್ಚಾಗಲಿದೆ ಅಲ್ಲದೆ ಗ್ರಾಮಗಳಲ್ಲಿ ವರ್ಷಪೂರ್ತಿ ನೀರಿನ ಅನುಕೂಲವಾಗುತ್ತದೆ, ಜನ ಜಾನುವಾರುಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ತಾಲೂಕಿನ ಸಲಾದಪುರ ಗ್ರಾಮದ ಹಳ್ಳದ ಬ್ಯಾರೇಜ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸಮೃದ್ಧಿ ಮಳೆಯಾದಾಗ ಮತ್ತು ಕಾಲುವೆಗಳಿಂದ, ಹಳ್ಳಕ್ಕೆ ಹರಿದು ಬರುವ ಹೆಚ್ಚಿನ ನೀರನ್ನು ಸಂಗ್ರಹಿಸಲು ಬ್ಯಾರೇಜ್ ಅತ್ಯಂತ ಉಪಯುಕ್ತವಾಗಿದ್ದು, ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣವಾಗಲಿದೆ.
ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು. ಅಧಿಕಾರಿಗಳು ಜವಬ್ದಾರಿಯಿಂದ ಕಾಳಜಿಪೂರ್ವಕವಾಗಿ ಅಚ್ಚುಕಟ್ಟಾಗಿ ಕೆಲಸ ಮುಗಿಸಬೇಕು. ಇದರಿಂದ ರೈತಾಪಿ ಜನರಿಗೆ ಹಲವಾರು ವರ್ಷಗಳವರೆಗೆ ಅನುಕೂಲವಾಗಲಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಸಾಕಷ್ಟು ಸರ್ಕಾರಿ ಯೋಜನೆಗಳಿದ್ದು, ಅದರ ಸದುಪಯೋಗ ಪಡೆಯಬೇಕೆಂದು ರೈತರಿಗೆ ಗ್ರಾಮಸ್ಥರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಗೌಡ ಪಾಟೀಲ ಹುಲ್ಕಲ್, ಹಿರಿಯ ಮುಖಂಡ ಶರಣಪ್ಪ ಸಲಾದಪುರ, ಬಸನಗೌಡ ಪಾಟೀಲ, ನೀರಾವರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜಪ್ಪ ಮಾಲಿಪಾಟೀಲ್, ಕಿರಿಯ ಇಂಜನಿಯರ್ ಸೇರಿದಂತೆ ಗುತ್ತಿಗೆದಾರರಾದ ಯಂಕಪ್ಪ.ಸಿ.ಟಣಕೇದಾರ ಇತರರಿದ್ದರು.