ಪ್ರಮುಖ ಸುದ್ದಿ
ಭೀಕರ ಅಪಘಾತ: ದೇಗುಲಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಐವರು ಸಾವು!
ತುಮಕೂರು : ಹೊಸವರುಷದ ನಿಮಿತ್ಯ ಆ ಕುಟುಂಬ ಮದ್ದೂರಿನಿಂದ ಕುಣಿಗಲ್ ತಾಲೂಕಿನ ಗೊರವನಹಳ್ಳಿಯ ಲಕ್ಷ್ಮೀ ದೇಗುಲಕ್ಕೆ ಹೊರಟಿತ್ತು. ಕಾರಿನಲ್ಲಿ ಎಂಟು ಜನ ದೇವಿಯ ದರುಶನಕ್ಕೆ ಹೊರಟಿದ್ದಾಗಲೇ ಕುಣಿಗಲ್ ತಾಲೂಕಿನ ಗವಿಮಠದ ಬಳಿ ಯಮರಾಯ ಅಪ್ಪಳಿಸಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಂತಿದ್ದ ಕ್ಯಾಂಟರ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಸಾವಿಗೀಡಾಗಿದ್ದು ಮೂವರ ಸ್ಥಿತಿ ಗಂಭೀರವಾಗಿದೆ.
ಮೃತರನ್ನು ಸಿದ್ದೋಜೀರಾವ್(60), ಉಷಾಬಾಯಿ(35), ಕೀರ್ತನ(7), ಹಿತೇಶ್(3) ಮತ್ತು ಭುವನ(16) ಎಂದು ಗುರುತಿಸಲಾಗಿದೆ. ಮೂವರು ಗಾಯಾಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಣಿಗಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣವೇನೆಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.