ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಬಗ್ಗೆ ಸರ್ಕಾರದಿಂದ ಪೊಳ್ಳು ಭರವಸೆಃ ಶಿರವಾಳ
ದರ್ಶನಾಪುರ ಹೇಳಿಕೆ ಅಲ್ಲಗಳೆದ ಶಾಸಕ ಶಿರವಾಳ
ಸುಳ್ಳು ಹೇಳಿದ್ದರೆ ಚುನಾವಣಾ ರಾಜಕೀಯದಿಂದ ನಿವೃತ್ತಿ ದರ್ಶನಾಪುರಗೆ ಸವಾಲೆಸೆದ ಶಿರವಾಳ
ಸುಳ್ಳು ಹೇಳಿ ರಾಜಕೀಯ ಮಾಡುವ ಸ್ಥಿತಿ ಬಂದಿಲ್ಲಃ ಶಿರವಾಳ
ಯಾದಗಿರಿಃ ಕಳೆದ ನಾಲ್ಕು ವರ್ಷದಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸುತ್ತಿದ್ದೇನೆ. ಕ್ಷೇತ್ರದ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ ಬಗ್ಗೆ ಸರ್ಕಾರ ಮಟ್ಟದಲ್ಲಿ ಯಾವುದೇ ಕೆಲಸಗಳಾಗಿಲ್ಲ. ಸರ್ಕಾರ ಕಣ್ಣೊರೆಸುವ ಕೆಲಸ ಮಾಡಿದೆ ಎಂದು ಶಾಸಕ ಗುರು ಪಾಟೀಲ್ ತಿಳಿಸಿದರು.
ಸೋಮವಾರ ಜಿಲ್ಲೆಯ ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಚಿವರು ತಮ್ಮದೆ ಕಾಂಗ್ರೆಸ್ ಸರ್ಕಾರವಿದ್ದ ಕಾರಣ ಪೀರಾಪುರ-ಬೂದಿಹಾಳ ಏತ ನೀರಾವರಿ ಯೋಜನೆ ತಾವೇ ಮಾಡಿಸಿದ್ದಾಗಿ ಸುಳ್ಳು ಹೇಳುವ ಮೂಲಕ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ನಾಲ್ಕು ವರ್ಷದಿಂದ ಹಲವಾರು ಬಾರಿ ಮನವಿ ಪತ್ರಗಳನ್ನು ಸರ್ಕಾರ ಸಲ್ಲಿಸಿದ್ದೇನೆ. ಅಲ್ಲದೆ ಮುಖ್ಯವಾಗಿ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ್ದೇನೆ. ದರ್ಶನಾಪುರ ಅವರು ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಗೆ ಸರ್ಕಾರ 200 ಕೋಟಿ ಮೀಸಲಿರಿಸಿದ್ದಾರೆ ಎಂದು ಒಮ್ಮೆ ಹೇಳಿಕೆ ನೀಡುತ್ತಾರೆ ಮಗದೊಮ್ಮೆ ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ವರದಿ ನೀಡಿದ ತಕ್ಷಣ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳುತ್ತಾರೆ. ಇದನ್ನು ನೋಡಿದರೆ ತಿಳಿಯುತ್ತೆ ಅವರ ಮಾತಿನಲ್ಲಿಯೇ ದ್ವಂದ್ವ ನಿಲುವಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ತಾವೂ ಏತ ನೀರಾವರಿ ಬಗ್ಗೆ ಸುಳ್ಳು ಹೇಳುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದು, ಮತ್ತೊಬ್ಬರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಸತ್ಯವಾಗಿಯೂ ಪೀರಾಪುರ-ಬೂದಿಹಾಳ ಏತ ನೀರಾವರಿ ಯೋಜನೆ ಕುರಿತು ಸರ್ಕಾರ ಮಟ್ಟದಲ್ಲಿ ಯಾವುದೇ ಕೆಲಸವಾಗಿಲ್ಲ. ಕಿಂಚಿತ್ತೂ ಮಾಹಿತಿ ಇಲ್ಲ.
ಕೇವಲ ಆಯವ್ಯಯದ ಪತ್ರಿಕೆಯಲ್ಲಿ ಬೂದಿಹಾಳ-ಪೀರಾಪುರ ಏತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಭಾಷಣದಲ್ಲಿ ಭರವಸೆ ನೀಡಿದಂತೆ ನಮೂದಿಸಿದ್ದಾರೆ. ಅಷ್ಟೆ ಹೊರತು ಯಾವುದೇ ಕ್ರಮಬದ್ಧ ಯೋಜನೆ ರೂಪಿತವಾಗಿಲ್ಲ. ಸರ್ಕಾರಿ ಮಟ್ಟದಲ್ಲಿ ಯಾವುದೇ ಈ ಯೋಜನೆ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಮಾಜಿ ಸಚಿವರಿಗೆ ರೈತರ ಮೇಲೆ ಕಾಳಜಿ ಹೊಂದಿದ್ದಲ್ಲಿ, ಈಗಲೂ ಸಮಯವಕಾಶವಿದ್ದು, ಅವರದೇ ಸರ್ಕಾರವಿದೆ ಸಚಿವ ಸಂಪುಟ ಸಭೆ ಕರೆಯಲು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುವ ಮೂಲಕ ಈ ಯೋಜನೆಗೆ ಹಣ ಮೀಸಲಿಡಿಸುವ ಕಾರ್ಯ ಮಾಡಲಿ. ಅದು ಬಿಟ್ಟು ಮತ್ತೊಬ್ಬರ ಮೇಲೆ ಹಾರಿಕೆ ಆರೋಪ ಮಾಡುವುದು ಸರಿಯಲ್ಲ ಎಂದು ಹರಿಹಾಯ್ದರು.
ವಿಜಯಪುರ ಜಿಲ್ಲೆಗೆ ಸಂಬಂಧಿಸಿದ ಬದಾಮಿ ಮತ್ತು ಇತರೆ ಏತ ನೀರಾವರಿ ಯೋಜನೆಗಳಿಗೆ ಕೋಟಿಗಟ್ಟಲೇ ಅನುದಾನ ಮೀಸಲಿಡುವ ಸರ್ಕಾರ, ಪೀರಾಪುರ-ಬೂದಿಹಾಳ ಏತ ನೀರಾವರಿಗೆ ಯಾಕೆ ಹಣ ಮೀಸಲಿಡಲಿಲ್ಲ ಎಂಬುದು ಮಾಜಿ ಸಚಿವ ದರ್ಶನಾಪುರ ಸ್ಪಷ್ಟ ಪಡಿಸಬೇಕಿದೆ. ಆಯವ್ಯಯದಲ್ಲಿ ಕೇವಲ ಕೇವಲ ಪೀರಾಪುರ-ಬೂದಿಹಾಳ ಏತ ನೀರಾವರಿ ಸೌಲಭ್ಯ ಎಂದು ಮಾತ್ರ ನಮೂದಿಸಿದರೆ ಏನರ್ಥ.? ಈ ಯೋಜನೆ ಬಗ್ಗೆ ಕಾಳಜಿ ಇದ್ದಲ್ಲಿ, ಈ ಭಾಗದ ರೈತರ ಬಗ್ಗೆ ಕಾಳಜಿ ಹೊಂದಿದ್ದರೆ ಯೋಜನೆಯ ರೂಪರೇಷೆಗಳು ಸಿದ್ಧ ಪಡಿಸಿ, ಖರ್ಚು ವೆಚ್ಚಗಳ ಬಗ್ಗೆ ನಮೂದಿಸಬೇಕಿತ್ತು ಎಂದು ಪ್ರಶ್ನಿಸಿದರು.
ಕಳೆದ ನಾಲ್ಕು ವರ್ಷದಿಂದ ಈ ಯೋಜನೆ ಕುರಿತು ಹತ್ತಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇನೆ. ಅಲ್ಲದೆ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಮತ್ತು ಆಲಮಟ್ಟಿ ಹಾಗೂ ಯಾದಗಿರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ, ಧರಣಿ ಮಾಡಿದ್ದೇನೆ. ಆಗಲು ಸರ್ಕಾರ ಕಣ್ಣೊರೆಸುವ ಕೆಲಸ ಮಾಡಿತು.
ಶಹಾಪುರದಲ್ಲಿ ಸಾಧನಾ ಸಮಾವೇಶ ಮಾಡಿದ ಮುಖ್ಯಮಂತ್ರಿಗಳು ನೀರಾವರಿ ಸಚಿವರು ಸುಳ್ಳು ಭರವಸೆ ನೀಡಿ ಹೋದರು. ಬಜೆಟ್‍ನಲ್ಲಿ ಮೂಗಿಗೆ ತುಪ್ಪ ಸವರಿದಂತೆ ನೀರಾವರಿ ಸೌಲಭ್ಯ ಎಂದು ಮಾತ್ರ ನಮೂದಿಸಿದರು. ಸರ್ಕಾರ ಮಟ್ಟದಲ್ಲಿ ಇಂದಿಗೂ ಪೀರಾಪುರ-ಬೂದಿಹಾಳ ಏತ ನೀರಾವರಿ ಬಗ್ಗೆ ಯಾವುದೇ ಕಾರ್ಯಕ್ರಮ ಕಾಗದ ಪತ್ರಗಳಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ನಾನು ಈ ಯೋಜನೆ ಬಗ್ಗೆ ಸುಳ್ಳು ಹೇಳಿದ್ದೇನೆ ಎಂಬ ಆರೋಪ ಮಾಡುವ ಮಾಜಿ ಸಚಿವರು ತಮಗೆ ಕಾಳಜಿ ಇದ್ದಲ್ಲಿ ಹತ್ತು ವರ್ಷದಿಂದ ಅಧಿಕಾರದಲ್ಲಿದ್ದಾಗ ಈ ಯೋಜನೆ ಜಾರಿಗೊಳಿಸಬೇಕಿತ್ತು.
ಅಧಿಕಾರದಲ್ಲಿದ್ದಾಗ ಆಗದು ಎಂದು ಕೈಚಲ್ಲಿ ಕುಳಿತಿದ್ದವರು, ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಈ ವಿಷಯದ ಬಗ್ಗೆ ಮಾತನಾಡುವುದು ಪ್ರಾಮಾಣಿಕವಾಗಿ ಕೆಲಸ ಮಾಡುವವರ ವಿರುದ್ಧ ಸುಳ್ಳು ಆರೋಪ ಮಾಡುವುದ ಎಷ್ಟರ ಮಟ್ಟಿಗೆ ಸರಿ. ಸುಳ್ಳು ಹೇಳಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವ ಕಾರ್ಯ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಬಗ್ಗೆ ಹಿತ ಚಿಂತನೆ ಮಾಡಲಿ, ಕ್ಷೇತ್ರದ ಅಭೀವೃದ್ಧಿ ಬಗ್ಗೆ ಚಿಂತನೆ ಮಾಡಲಿ ಅವರದ್ದೆ ಸರ್ಕಾರವಿದೆ ಕೆಲಸ ಮಾಡಿಸಬಹುದಿತ್ತು. ಕೆಂಭಾವಿ ತಾಲೂಕುನ್ನಾಗಿಸಬಹುದಿತ್ತು ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮುಖಂಡರಾದ ಮಲ್ಲಣ್ಣ ಮಡ್ಡಿ, ಲಾಲನ್ಸಾಬ ಖುರೇಶಿ, ಭೀಮಯ್ಯಗೌಡ ಗುತ್ತೇದಾರ, ರಾಜಶೇಖರ ನಗನೂರ, ವಸಂತಕುಮಾರ ಸುರಪುರಕರ್ ಉಪಸ್ಥಿತರಿದ್ದರು.
ದರ್ಶನಾಪುರಗೆ ಸವಾಲ್ ಹಾಕಿದ ಶಿರವಾಳ
ಕ್ಷೇತ್ರದಲ್ಲಿ ಕೈಗೊಂಡ ಯಾವುದೇ ಕೆಲಸ ಕಾರ್ಯಗಳ ಬಗ್ಗೆ ಸುಳ್ಳು ಹೇಳಿದ್ದಲ್ಲಿ ದರ್ಶನಾಪುರ ಅವರು ಸಾಬೀತು ಪಡಿಸಲಿ, ತಕ್ಷಣ ನಾನು ಚುನಾವಣೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಶಾಸಕ ಗುರು ಪಾಟೀಲ್ ದರ್ಶನಾಪುರರಿಗೆ ಸವಾಲೆಸೆದರು.
ಈ ಸವಾಲನ್ನು ಸ್ವೀಕರಿಸಿದ್ದಲ್ಲಿ ಅವರು ಬದ್ಧತೆಯಿಂದ ನಡೆದುಕೊಳ್ಳಲಿ. ಕೇತ್ರದಲ್ಲಿ ನಾನು ಕೈಗೊಂಡ ಕಾಮಗಾರಿಗಳ ಕೆಲಸ ಶೇ.99 ರಷ್ಟು ಮುಗಿದಿವೆ. ಹಲವು ಕೆಲಸಗಳು ಟೆಂಡರ್ ಕರೆಯಲಾಗಿದೆ. ಕೆಲವು ಕಾಮಗಾರಿಗಳು ಚಾಲ್ತಿಯಲ್ಲಿವೆ. ಸಮರ್ಪಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ ತೃಪ್ತಿ ನನಗಿದೆ. ಯಾವುದೇ ಕಾಮಗಾರಿ ಯೋಜನೆ ಬಗ್ಗೆ ಸುಳ್ಳು ಹೇಳಿಲ್ಲ. ಸುಳ್ಳು ಹೇಳಿ ರಾಜಕೀಯ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ ಎಂದರು.
ನೀರಾವರಿ ಮಂತ್ರಿ ಬಬಲೇಶ್ವರ ಕ್ಷೇತ್ರಕ್ಕೆ ಮಾತ್ರ ಸೀಮಿತ
ರಾಜ್ಯ ನೀರಾವರಿ ಮಂತ್ರಿ ಎಂ.ಬಿ.ಪಾಟೀಲ್ ಇಡಿ ರಾಜ್ಯಕ್ಕೆ ಮಂತ್ರಿ ಎನ್ನುವುದು ಮರೆತಂತಿದೆ. ಅವರು ಕೇವಲ ತಮ್ಮ ಬಬಲೇಶ್ವರ ಕ್ಷೇತ್ರಕ್ಕೆ ಮಾತ್ರ ನೀರಾವರಿ ಮಂತ್ರಿಯಾಗಿದ್ದಾರೆ ಎಂದು ಛೇಡಿಸಿದ ಶಾಸಕ ಗುರು ಪಾಟೀಲ್, ನೀರಾವರಿ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಏತ ನೀರಾವರಿ ಯೋಜನೆಗಳಲ್ಲಿ ವಿಜಯಪುರ ಜಿಲ್ಲೆಯ ಹಲವಾರು ಗ್ರಾಮಗಳನ್ನು ಸೇರ್ಪಡೆ ಮಾಡಿದ್ದಾರೆ.
ಆದರೆ ಶಹಾಪುರ ಮತ್ತು ಸುರಪುರ ತಾಲೂಕಿನ ಯಾವುದೇ ಗ್ರಾಮಗಳನ್ನು ಪೀರಾಪುರ-ಬೂದಿಹಾಳ ಏತ ನೀರಾವರಿ ಯೋಜನೆಯಡಿ ಸೇರ್ಪಡೆಗೊಳಿಸಿಲ್ಲ. ಅಲ್ಲದೆ ಇಲ್ಲಿವರೆಗೂ ಈ ಯೋಜನೆ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಹಣ ಮೀಸಲಿಟ್ಟ ಬಗ್ಗೆ ಹೇಳಿಕೆಯೂ ನೀಡಿಲ್ಲ. ಆಯವ್ಯಯದಲ್ಲಿ ಈ ಯೋಜನೆಗೆ ಯಾವುದೇ ಹಣ ಮೀಸಲಿಟ್ಟಿಲ್ಲ. ಬಾಯಿ ಮಾತಿನಂತೆ ಯೋಜನೆಯ ಹೆಸರು ಮಾತ್ರ ನಮೂದಿಸಿದ್ದಾರೆ.