ದಾವಣಗೆರೆ: ಕಾಡಾನೆಗಳನ್ನು ಕಾಡಿಗಟ್ಟಲು ಬಂದಿವೆ ದಸರಾ ಆನೆಗಳು!
ದಾವಣಗೆರೆ: ಕಳೆದ ಒಂದು ತಿಂಗಳಿನಿಂದ ಕೋಟೆನಾಡು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಮಂದಿಯನ್ನು ಕಾಡಿದ್ದ ಕಾಡಾನೆಗಳನ್ನು ಕಾಡಿಗಟ್ಟು ಕಾರ್ಯಾಚರಣೆ ಕೊನೆಗೂ ಆರಂಭವಾಗಿದೆ. ಕಳೆದ ಒಂದು ತಿಂಗಳಲ್ಲಿ ಆಂದ್ರದ ಗಡಿಯಲ್ಲಿ ಇಬ್ಬರು ರೈತರು, ಚಿತ್ರದುರ್ಗದಲ್ಲಿ ಓರ್ವ ರೈತ , ದಾವಣಗೆರೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆಗಳು 20ಜನರನ್ನು ಗಾಯಗೊಳಿಸಿದ್ದವು. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿರಲಿಲ್ಲ. ಬದಲಾಗಿ ಬಂದ ದಾರಿಯಲ್ಲೇ ಆನೆಗಳು ಮರಳಲಿವೆ ಎಂದು ಹೇಳುತ್ತ ಸಾಮಾನ್ಯ ಜನರಂತೆ ಆನೆ ಕಾಣಿಸಿಕೊಂಡ ಸ್ಥಳಗಳಿಗೆ ಭೇಟಿ ನೀಡಿ ಹಿಂದಿರುಗುತ್ತಿದ್ದರು.
ಡಿಸೆಂಬರ್ 15ರಂದು ಚಿತ್ರದುರ್ಗದ ತಾಳಿಕಟ್ಟೆ ಗ್ರಾಮದ ಬಳಿ ಏಳು ಜನರನ್ನು ಗಾಯಗೊಳಿಸಿದ ಆನೆ ಓರ್ವ ರೈತನ ಬಲಿ ಪಡೆದಿದೆ. ಹೀಗಾಗಿ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ರೈತರ ಸಹನೆಯ ಕಟ್ಟೆ ಒಡೆದಿದ್ದು ಅರಣ್ಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮೈಸೂರಿನಿಂದ ಅಭಿಮನ್ಯು, ಹರ್ಷ ಸೇರಿದಂತೆ ಐದು ಆನೆಗಳು ಹಾಗೂ ಶಿವಮೊಗ್ಗದ ಸಕ್ರ ಬೈಲ್ ನಿಂದ ಎರಡು ಹೆಣ್ಣಾನೆಗಳನ್ನು ಕರೆಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ದಾವಣಗೆರೆ ಹಾಗೂ ಶಿವಮೊಗ್ಗದ ಗಡಿ ಭಾಗದಲ್ಲಿರುವ ಉಬರಾಣಿ ಅರಣ್ಯ ಬಳಿ ಕಾಡಾನೆಗಳು ಬೀಡು ಬಿಟ್ಟಿರುವ ಮಾಹಿತಿ ಮೇರೆಗೆ ಒಟ್ಟು 70ಜನ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಕಾಡಾನೆಗಳು ಯಾವ ಭಾಗದಲ್ಲಿವೆ ಎಂದು ಪತ್ತೆ ಹಚ್ಚುವ ಕಾರ್ಯದಲ್ಲಿ ನುರಿತ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಕಾಡಾನೆಗಳನ್ನು ಕಾಡಿಗಟ್ಟಲು ಮೈಸೂರು ದಸರಾ ಆನೆಗಳು ಬಂದಿವೆ ಎಂಬ ಸುದ್ದಿ ಹಬ್ಬಿದ್ದು ಸ್ಥಳದಲ್ಲಿ ಜನಜಾತ್ರೆಯೇ ಸೇರುತ್ತಿದೆ. ಎನಿವೇ ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯದಲ್ಲಿ ಯಶಸ್ವಿ ಆಗಲಿ. ಜನಸಾಮಾನ್ಯರ ಜೀವ ರಕ್ಷಣೆ ಆಗಲಿ ಎಂಬುದು ವಿನಯವಾಣಿ ಆಶಯ.