ದತ್ತ ಜಯಂತಿ: ದತ್ತಪೀಠದಲ್ಲಿ ಪೊಲೀಸರಿಂದ ಲಾಠಿ ಪ್ರಹಾರ!
ಚಿಕ್ಕಮಗಳೂರು: ದತ್ತ ಜಯಂತಿ ಪ್ರಯುಕ್ತ ನಾಡಿನೆಲ್ಲೆಡೆಯಿಂದ ದತ್ತ ಮಾಲಾಧಾರಿಗಳು ಇಂದು ದತ್ತಪೀಠದತ್ತ ಹೆಜ್ಜೆ ಹಾಕಿದ್ದಾರೆ. ಪರಿಣಾಮ ಸಾವಿರಾರು ಜನ ದತ್ತ ಭಕ್ತರು ದತ್ತಪೀಠದಲ್ಲಿ ಜಮಾಯಿಸಿದ್ದಾರೆ. ದತ್ತ ಪಾದುಕೆ ದರ್ಶನ ಪಡೆದು ಭಕ್ತಿ ಸಮರ್ಪಿಸಿದ್ದಾರೆ. ಆದರೆ, ವಿವಾದಿತ ದತ್ತಪೀಠದಲ್ಲಿ ಭಕ್ತರು ಧ್ವಜ ನೆಡಲು ಮುಂದಾದಾಗ ಪೊಲೀಸರು ತಡೆದಿದ್ದಾರೆ.
ದತ್ತಭಕ್ತರು ಮತ್ತು ಪೊಲೀಸರ ಮದ್ಯೆ ತೀವ್ರ ವಾಗ್ವಾದ ನಡೆದಿದೆ. ತಳ್ಳಾಟ ನೂಕಾಟ ನಡೆದಿದ್ದು ಪತಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದ್ದಾರೆ. ಪರಿಣಾಮ ದತ್ತ ಭಕ್ತರು ಚದುರಿ ಓಡಿದ್ದು ದತ್ತ ಪಾದುಕೆ ದರ್ಶನಕ್ಕೆ ಬಂದ ಭಕ್ತರು ಹೈರಾಣಾಗುವಂತಾಗಿದೆ. ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದು ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಜರುಗಿಸಿದ್ದಾಗಿ ಹೇಳಿದ್ದಾರೆ.
ಮತ್ತೊಂದು ಕಡೆ ಮೈಸೂರಿನ ಹುಣಸೂರು ಪಟ್ಟಣದಲ್ಲಿ ಹನುಮ ಭಕ್ತರ ಮೇಲೂ ಲಾಠಿ ಚಾರ್ಜ್ ನಡೆದಿದೆ. ಹೀಗಾಗಿ, ಸರ್ಕಾರ ಹಿಂದೂ ಸಂಸ್ಕೃತಿಯನ್ನು ಹತ್ತಿಕ್ಕುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಗರಂ ಆಗಿದ್ದಾರೆ. ಪೊಲೀಸರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದು ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.